ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಮತ್ತೊಮ್ಮೆ ಏರಿಕೆಯಾಗಲಿದೆಯೇ? ಇಂಧನ ಕ್ಷೇತ್ರದಲ್ಲಿ ಈ ಬಗ್ಗೆ ರಹಸ್ಯ ಪ್ರಕ್ರಿಯೆಗಳು ಸಾಗಿವೆ ಎಂದು ಮೂಲಗಳು ತಿಳಿಸಿವೆ.
ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ ತಯಾರಿಯಲ್ಲಿ ತೊಡಗಿದ್ದು ಈ ಹಿನ್ನೆಲೆಯಲ್ಲಿ ಶೀಘ್ರವೇ ಅದಾಲತ್ ನಡೆಸಲಿದೆ. ಫೆಬ್ರವರಿ ತಿಂಗಳಲ್ಲಿ ಈ ಅದಾಲತ್ ನಡೆಸುವ ಸಾಧ್ಯತೆಗಳಿದ್ದು, ಅದಕ್ಕೂ ಮುನ್ನ ವಿದ್ಯುತ್ ದರ ಹೆಚ್ಚಳ ಸಂಬಂಧ ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಮತ್ತು ಸೆಸ್ಕ್ ವಿದ್ಯುತ್ ಸರಬರಾಜು ಕಂಪನಿಗಳು ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿವೆ ಎನ್ನಲಾಗಿದೆ.

ಈ ನಡುವೆ, ಲೋಕಸಭಾ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ತಾರಾತುರಿಯಲ್ಲೇ ವಿದ್ಯುತ್ ದರ ಏರಿಕೆ ಬೇಡ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಚುನಾವಣೆಗೆ ಮುನ್ನ ವಿದ್ಯುತ್ ದರ ಏರಿಕೆಯಾಗದಿದ್ದರೂ, ಮೇ ತಿಂಗಳ ನಂತರ ದರ ಪರಿಷ್ಕರಣೆ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗಲ್ಲ ಎಂದು ವಿದ್ಯುತ್ ಕಂಪನಿಗಳ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.






















































