ಶಿವಮೊಗ್ಗ: ಕಸ್ತೂರಿರಂಗನ್ ವರದಿ ಜಾರಿಯಿಂದ ತೀರ್ಥಹಳ್ಳಿ ತಾಲೂಕಿನ 157 ಗ್ರಾಮಗಳಿಗೆ ಉಂಟಾಗಬಹುದಾದ ಆತಂಕದ ಹಿನ್ನೆಲೆಯಲ್ಲಿ ವರದಿ ಜಾರಿ ವಿರೋಧಿಸಿ ಸೆಪ್ಟೆಂಬರ್ 3ರಂದು ತೀರ್ಥಹಳ್ಳಿಯಲ್ಲಿ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ.
ತಾಲೂಕಿನ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಹಾಗೂ ಸಹಕಾರ ಸಂಘಗಳ ಸಹಯೋಗದಲ್ಲಿ ಸಭೆ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಭೆ ಆಯೋಜಿಸಲಾಗಿದೆ.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು, ಎಲ್ಲ ರಾಜಕೀಯ ಪಕ್ಷಗಳ ಅಧ್ಯಕ್ಷರು, ಮುಖಂಡರು ಹಾಗೂ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಹಕಾರ ಸಂಘಗಳ ಸದಸ್ಯರು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುವ ನಿರ್ಣಯ ಕೈಗೊಳ್ಳುವುದು ಸಭೆಯ ಪ್ರಮುಖ ಉದ್ದೇಶವಾಗಿದೆ. ವರದಿಯಿಂದ 157 ಗ್ರಾಮಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಿ, ಪಕ್ಷಾತೀತವಾಗಿ ಒಗ್ಗೂಡಿ ವಿರೋಧ ವ್ಯಕ್ತಪಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.







































































