ಬೆಂಗಳೂರು: ದೇಶದ ಸಾಹಿತ್ಯ ಲೋಕಕ್ಕೆ ಸಂಬಂಧಿಸಿದಂತೆ, ಅತ್ಯಂತ ವಿಭಿನ್ನ ಮತ್ತು ವಿಶಿಷ್ಟವಾದಂತಹ ಕೃತಿಯೊಂದು ಲೋಕಾರ್ಪಣೆಯಾಗಿದೆ.
ಡಾ|| ರಾಜ್ ಕುಮಾರ್ ರವರ ಚಿತ್ರ ಜೀವನಕ್ಕೆ ಸಂಬಂಧಿಸಿದಂತೆ, ಅವರು ನಟಿಸಿರುವ ಮೊದಲನೇ ಚಿತ್ರ “ಬೇಡರ ಕಣ್ಣಪ್ಪ”ದಿಂದ ಹಿಡಿದು ಕೊನೆಯ ಚಿತ್ರ “ಶಬ್ದವೇದಿ”ಯವರೆಗಿನ 209 ಚಲನಚಿತ್ರಗಳಿಗೆ ಸಂಬಂಧಿಸಿದಂತೆ, 209 ಪಂಚಪದಿಗಳನ್ನು ರಚಿಸಿರುವ “ರಾಜಕುಮಾರ ಪಂಚಪದಿ” ಕೃತಿಯು ಲೋಕಾರ್ಪಣೆಯಾಗಿದೆ.
ವಿಶ್ವದ ಯಾವುದೇ ರಂಗದ ಯಾವುದೇ ಒಬ್ಬ ಸಾಧಕನಿಗೆ ಸಂಬಂಧಿಸಿದಂತೆ ಇದುವರೆಗೂ ಬರೆಯಲಾಗದಂತಹ ಕೃತಿಯನ್ನು ಅದ್ಭುತವಾಗಿ ಬರೆದಿರುವ ಮಂಜುನಾಥ್ ಹಾಲುವಾಗಿಲು ರವರ “ರಾಜಕುಮಾರ ಪಂಚಪದಿ” ಕೃತಿಯನ್ನು ಸ್ನೇಹ ಪ್ರಕಾಶನದ ಪರಶಿವಪ್ಪನವರು ಮುದ್ರಿಸಿ ಹೊರತಂದಿದ್ದಾರೆ.
ಶನಿವಾರ ಮಧ್ಯಾಹ್ನ 02 ಗಂಟೆಗೆ 100 ಮಂದಿ ಮಹನೀಯರು 100 ಪ್ರತ್ಯೇಕ ಸ್ಥಳಗಳಿಂದ ಈ ಪುಸ್ತಕವನ್ನು ಬಿಡುಗಡೆ ಮಾಡಿರುವುದು ಅತ್ಯಂತ ವಿಶೇಷ.
ಸಿದ್ಧಗಂಗಾ ಶ್ರೀಗಳು, ಬರಗೂರು ರಾಮಚಂದ್ರಪ್ಪ, ಪ್ರೊಫೆಸರ್ ಸಿದ್ಧಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಅರಳುಮಲ್ಲಿಗೆ ಪಾರ್ಥಸಾರಥಿ, ಚಕ್ರವರ್ತಿ ಸೂಲಿಬೆಲೆ,ರಾಜ್ಯದ ಉಪ ಮುಖ್ಯಮಂತ್ರಿ ಡಾll ಅಶ್ವಥ್ ನಾರಾಯಣ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ತೇಜಸ್ವಿ ಸೂರ್ಯ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ನೆನಪಿರಲಿ ಪ್ರೇಮ್, ಧ್ರುವ ಸರ್ಜಾ, ಯುವರಾಜ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷರು ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾಗಿರುವ ಎನ್. ಆರ್. ರಮೇಶ್, ಮಾಜಿ ಮಹಾಪೌರ ಗೌತಮ್ ಕುಮಾರ್, ಮಾಜಿ ಬಿಬಿಎಂಪಿ ಸದಸ್ಯರಾಗಿರುವ ಎಸ್. ಕೆ. ನಟರಾಜ್, ಎಲ್. ಶ್ರೀನಿವಾಸ್, ಎ. ಹೆಚ್. ಬಸವರಾಜ್, ಗೋಪಿ, ಕೇಶವಮೂರ್ತಿ, ಚಂದ್ರಶೇಖರ್ ರಾಜು, ನಾಗರಾಜು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ನೂರಕ್ಕೂ ಹೆಚ್ಚು ಮಂದಿ ಮಹನೀಯರು “ರಾಜಕುಮಾರ ಪಂಚಪದಿ” ಕೃತಿಯನ್ನು ಅವರವರ Facebook Live ನಲ್ಲಿ ಲೋಕಾರ್ಪಣೆ ಮಾಡಿದ್ದಾರೆ.
ಈ ಕೃತಿ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಎನ್.ಆರ್.ರಮೇಶ್, ಈ ಪಂಚಪದಿ ಕೃತಿಯು 05 ಸಾಲುಗಳಲ್ಲಿ ಆಯಾ ಚಿತ್ರಗಳ ಕಥೆ, ನಾಯಕ – ನಾಯಕಿಯ ಹೆಸರುಗಳನ್ನು ಒಳಗೊಂಡಂತೆ, 05 ಸಾಲುಗಳ ಮೊದಲನೇ ಅಕ್ಷರಗಳು ಮೇಲಿನಿಂದ ಕೆಳಗೆ ಓದಿದಾಗ “ರಾಜಕುಮಾರ” ಪದವು ಬರುವಂತೆ ಅದ್ಭುತವಾಗಿ ರಚಿಸಿರುವ “ರಾಜಕುಮಾರ ಪಂಚಪದಿ” ಕೃತಿಯನ್ನು ಸಮಸ್ತ ಕನ್ನಡಿಗರು ಪಡೆದುಕೊಳ್ಳುವ ಮೂಲಕ ಡಾ|| ರಾಜ್ ಕುಮಾರ್ ಅವರಿಗೆ ಗೌರವ ಸಮರ್ಪಣೆಯನ್ನು ಮಾಡಬೇಕೆಂದು ಮತ್ತು ಆ ಮೂಲಕ ವಿಭಿನ್ನವಾಗಿ ಈ ಕೃತಿಯನ್ನು ರಚಿಸಿರುವ ಮಂಜುನಾಥ್ ಹಾಲುವಾಗಿಲು ರವರಿಗೆ ಮತ್ತಷ್ಟು ಕೃತಿಗಳನ್ನು ಬರೆಯುವ ಉತ್ತೇಜನವನ್ನು ನೀಡುವ ಜವಾಬ್ದಾರಿ ಸಮಸ್ತ ಕನ್ನಡಿಗರದ್ದಾಗಿದೆ ಎಂದು ವಿನಂತಿಸಿಕೊಳ್ಳಲಾಗಿದೆ ಎಂದಿದ್ದಾರೆ.