ನವದೆಹಲಿ: UPSC ನಾಗರಿಕ ಸೇವಾ ಪರೀಕ್ಷೆಯ ಯಶಸ್ವಿ ಅಭ್ಯರ್ಥಿಗಳ ಬಗ್ಗೆ ದಾರಿತಪ್ಪಿಸುವ ಜಾಹೀರಾತು ಪ್ರಕಟಿಸಿದ ಆರೋಪದಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA)ವು ವಜಿರಾಮ್ ಮತ್ತು ರವಿ IAS ಅಧ್ಯಯನ ಕೇಂದ್ರ LLPಗೆ ₹7 ಲಕ್ಷ ದಂಡ ವಿಧಿಸಿದೆ.
ಪರಿಶೀಲನೆಯಲ್ಲಿ, ಸಂಸ್ಥೆಯು UPSC-2023ರ ಯಶಸ್ವಿ ಅಭ್ಯರ್ಥಿಗಳ ಹೆಸರು, ಛಾಯಾಚಿತ್ರ ಮತ್ತು ರ್ಯಾಂಕ್‌ಗಳನ್ನು ತನ್ನ ಜಾಹೀರಾತುಗಳಲ್ಲಿ ಬಳಸಿಕೊಂಡಿದ್ದರೂ, ಅವರು ಸಂಸ್ಥೆಯಲ್ಲಿ ಯಾವ ಕೋರ್ಸ್‌ಗೆ ಸೇರಿದ್ದರು ಎಂಬ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ ಎಂದು ತಿಳಿದುಬಂದಿದೆ.
CCPA ಪ್ರಕಾರ, ಜಾಹೀರಾತಿನಲ್ಲಿ ಉಲ್ಲೇಖಿಸಲಾದ ಅನೇಕ ಅಭ್ಯರ್ಥಿಗಳು ಸಂಸ್ಥೆಯ ಪೂರ್ಣ ಪ್ರಮಾಣದ ತರಬೇತಿ ಪಡೆದವರಲ್ಲ. ಅವರು ಕೇವಲ ಉಚಿತ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮ (Interview Guidance Programme – IGP) ನಲ್ಲಿ ಭಾಗವಹಿಸಿದ್ದರು. ಆದರೆ, ಸಂಸ್ಥೆಯು ಅವರನ್ನು ತನ್ನ ತರಬೇತಿ ಕಾರ್ಯಕ್ರಮದ ಯಶಸ್ಸಿನ ಭಾಗವಾಗಿ ಬಿಂಬಿಸಿ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಇಂತಹ ಕ್ರಮ ಗ್ರಾಹಕರಿಗೆ ನಿಖರ ಮಾಹಿತಿ ಪಡೆಯುವ ಹಕ್ಕನ್ನು ಉಲ್ಲಂಘಿಸುವುದರ ಜೊತೆಗೆ, ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಅಡಿಯಲ್ಲಿ ದಾರಿತಪ್ಪಿಸುವ ಜಾಹೀರಾತು ಎಂದು ಪರಿಗಣಿಸಲಾಗಿದೆ.
CCPA ಮಾಹಿತಿ ಪ್ರಕಾರ, ತರಬೇತಿ ಸಂಸ್ಥೆಗಳ ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ ಕಳೆದ ಕೆಲವು ವರ್ಷಗಳಲ್ಲಿ 60ಕ್ಕೂ ಹೆಚ್ಚು ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದ್ದು, ಒಟ್ಟು ₹1.46 ಕೋಟಿಗೂ ಅಧಿಕ ದಂಡ ವಿಧಿಸಲಾಗಿದೆ.
























































