ದೊಡ್ಡಬಳ್ಳಾಪುರ: ನಗರಸಭೆಯ 15ನೇ ಹಣಕಾಸು ಮತ್ತು ನಗರಸಭಾ ನಿಧಿಯಡಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ನಗರ ವ್ಯಾಪ್ತಿಯಲ್ಲಿ ಒಟ್ಟು 18 ಕಾಂಕ್ರೀಟ್ ರಸ್ತೆ, ಚರಂಡಿ, ಸಮುದಾಯ ಶೌಚಾಲಯ, ಮೂಲಭೂತ ಸೌಕರ್ಯಗಳ ಸೇರಿ ವಿವಿಧೆಡೆ ಕಾಮಗಾರಿ ಹಾಗೂ ಯೋಜನೆಗಳಿಗೆ ನಗರಸಭೆಯ ಅನುದಾನದ ಬಳಕೆ ಮಾಡಿಕೊಂಡು ಚಾಲನೆ ನೀಡಲಾಗಿದೆ. ಒಟ್ಟು ಒಂದು ಕೋಟಿ 75 ಲಕ್ಷ ರೂ.ಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು. .
ಸಿದ್ದರಾಮಯ್ಯ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ನಗರಾಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಈ ಸರ್ಕಾರ ವಾಪಸ್ ಪಡೆದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಪೌರಾಯುಕ್ತ ರಮೇಶ್ ಸುಣಗಾರ್ ಮಾತನಾಡಿ ನಗರದಾದ್ಯಂತ ವಿವಿಧ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದಾರೆ ಎಲ್ಲಾ ಕಾಮಗಾರಿ ಉತ್ತಮ ಗುಣಮಟ್ಟ ಕಾಪಾಡಿಕೊಂಡು ಕೆಲಸ ಮಾಡಲಾಗುವುದು. ಕಳಪೆ ಯೋಜನೆ ಕಂಡುಬಂದರೆ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ನಗರಸಭಾ ಅಧಿಕಾರಿಗಳಾದ ಚಂದ್ರಶೇಖರ್, ರಘುನಾಥ್, ಈರಣ್ಣ, ಕಾಂಗ್ರೆಸ್ ಮುಖಂಡರಾದ ಜಗನ್ನಾಥ್, ರಾಮಾಂಜಿನಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.