(ವರದಿ: ಸುರೇಶ್ ಬಾಬು, ದೊಡ್ಡಬಳ್ಳಪುರ)
ಬೆಂಗಳೂರು: ರಾಜಧಾನಿ ಸುತ್ತಮುತ್ತ ಜನರಲ್ಲಿ ಭೀತಿ ಹುಟ್ಟಿಸಿದ್ದ, ಪೊಲೀಸರಿಗೂ ಸವಾಲಾಗಿದ್ದ ನಟೋರಿಯಸ್ ದರೋಡೆಕೋರರ ತಂಡ ಖಾಕಿ ಖೆಡ್ಡಕ್ಕೆ ಬಿದ್ದಿದೆ. ಪೊಲೀಸರು ನಡೆಸಿದ ಯಶಸ್ವೀ ಕಾರ್ಯಾಚರಣೆಯಲ್ಲಿ ಈ ಗ್ಯಾಂಗ್ ಅರೆಸ್ಟ್ ಆಗಿದೆ.
ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು ಈ ಯಶಸ್ವೀ ಕಾರ್ಯಾಚರಣೆ ಕೈಗೊಂಡಿದ್ದು 8 ಜನರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಬಳಿ ಮಧ್ಯ ರಾತ್ರಿ ಕ್ಯಾಶ್ ನೊಂದಿಗೆ ಮನೆಗೆ ತೆರಳುತ್ತಿದ್ದ ಬಾರ್ ಕ್ಯಾಷಿಯರ್‌ನನ್ನು ಅಡಗಟ್ಟಿ ಖದೀಮರ ತಂಡ ದರೋಡೆ ನಡೆಸಿತ್ತು. ಈ ಭಯಾನಕ ಕೃತ್ಯದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧಾರವಾಗಿಟ್ಟು ಕಾರ್ಯಾಚರಣೆ ಕೈಗೊಂಡ ಪೊಲೀಸರು ಸರಣಿ ಕೃತ್ಯಗಳ ಸರದಾರರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಬೆಂಗಳೂರು ನಗರದ ಸುತ್ತಮುತ್ತ ಮಧ್ಯರಾತ್ರಿ ಜನರನ್ನ ಅಡ್ಡಗಟ್ಟಿ ರಾಬರಿ ಮಾಡುತ್ತಿತ್ತು ಎಂಬ ಸಂಗತಿ ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಮಧ್ಯರಾತ್ರಿ ರಸ್ತೆಯಲ್ಲಿ ಹೋಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಈ ದರೋಡೆ ಗ್ಯಾಂಗ್ ಈಗ ಬಂಧಿಯಾಗಿದೆ.
ಏನಿದು ಪ್ರಕರಣ?
ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನೆನಹಳ್ಳಿಯ ಪೆಟ್ರೋಲ್ ಬಂಕ್ ಬಳಿ ನವೆಂಬರ್‌ನಲ್ಲಿ, ನಾಲ್ಕು ಬೈಕ್‌ಗಳಲ್ಲಿ ಬಂದ ದರೋಡೆಕೋರರು ಈ ಕೃತ್ಯ ಸುಮಾರು 2.20 ಲಕ್ಷ ರೂ ಹಣ ದೋಚಿ ಪರಾರಿಯಾಗಿತ್ತು. ಈ ಭಯಾನಕ ರಾಬರಿ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಫೊಟೋಗಳನ್ನು ಆಧಾರವಾಗಿಟ್ಟು ಡಕಾಯಿತರ ಹೆಜ್ಜೆ ಗುರುತು ಬೆನ್ನತ್ತಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆಯ ವೇಳೆ, ಬೆಂಗಳೂರು ಸುತ್ತಮುತ್ತ ನಡೆದಿರುವ ಸುಮಾರು 12 ರಾಬರಿ ಪ್ರಕರಣಗಳ ರಹಸ್ಯವೂ ಬಯಲಾಗಿದೆ.