ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕಾರ್ಯ ಚುರುಕಾಗಿದೆ. ಯೋಜನೆಯ ಸೌಲಭ್ಯ ಪಡೆಯಲು ನೋಂದಣಿ ಮಾಡಿಸಲು ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರ , ಸಾಮಾನ್ಯ ಸೇವಾ ಸಿಂಧು ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಬೆಳಗ್ಗೆ ಕೇಂದ್ರಗಳು ತೆರೆಯುತ್ತಿದ್ದಂತೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಸರ್ಕಾರ ಜು.20ರಿಂದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಅವಕಾಶ ಮಾಡಿಕೊಟ್ಟಿತ್ತು. ಜನರ ಮನೆ ಬಾಗಿಲಿಗೆ ಬಂದು ಯೋಜನೆಯಡಿ ಫಲಾನುಭವಿಗಳ ನೊಂದಣಿ ಮಾಡಿಕೊಳ್ಳುವ ಬಗ್ಗೆ ತಿಳಿಸಿದೆ. ಇದಲ್ಲದೆ ನೋಂದಣಿ ಮಾಡಿಸಲು ಯಾವುದೇ ಕಾಲಮಿತಿ ಇಲ್ಲ ಎಂದರೂ ಕೂಡ ಮಹಿಳೆಯರು ಹೆಚ್ಚಾಗಿ ನೋಂದಣಿಗೆ ಮುಗಿಬೀಳುತ್ತಿದ್ದು, ಎಲ್ಲೆಡೆ ನೊಂದಣಿ ಹೆಚ್ಚಿದ ಪರಿಣಾಮ ಸರ್ವರ್ ಡೌನ್ ಆಗಿದ್ದು ,ನಿಧಾನವಾಗಿ ನೋಂದಣಿ ಕಾರ್ಯ ನಡೆಯುತ್ತಿದೆ.
ಸರ್ಕಾರ ಅನೇಕ ಯೋಜನೆಯ ಸೌಲಭ್ಯ ಪಡೆಯಲು ಆಧಾರ್ ಮಾಹಿತಿ ಕಡ್ಡಾಯ ಮಾಡಿದೆ. ಇದರಿಂದ ಬ್ಯಾಂಕ್, ಆಧಾರ್ ತಿದ್ದುಪಡಿ ಕೇಂದ್ರಗಳಿಗೆ ಜನರು ಆಧಾರ್ ಕಾರ್ಡ್, ಮೊಬೈಲ್ ನಂಬರ್ ಬದಲಾವಣೆ, ವಿಳಾಸ ಸೇರಿದಂತೆ ಅನೇಕ ತಿದ್ದುಪಡಿಗೆ ಮುಗಿಬೀಳುತ್ತಿದ್ದಾರೆ. ಇದಲ್ಲದೆ ಗ್ರಾಹಕರು ಬ್ಯಾಂಕ್ ಖಾತೆಯನ್ನು ಸಕ್ರಿಯ ಪಡಿಸಿಕೊಳ್ಳಲು ಕೂಡ ಜನರು ಮುಂದಾಗಿದ್ದಾರೆ.