ಗೃಹಬಳಕೆ ಅಡುಗೆ ಅನಿಲವನ್ನು ವಾಹನಗಳಿಗೆ ಅಕ್ರಮ ರಿ-ಪಿಲ್ಲಿಂಗ್ ಬಳಕೆ..
ವಿಶೇಷ ವರದಿ: ಹೆಚ್ಎಂಪಿ ಕುಮಾರ್
ದಾವಣಗೆರೆ:ಗೃಹ ಬಳಕೆಯ ಅನಿಲ ಸಿಲಿಂಡರ್ ದರ ಯಾಕೆ ಗಗನಕ್ಕೆರಿದೆ ಎಂದು ಹುಡುಕುತ್ತಾ ಹೋದರೆ ಗ್ಯಾಸ್ ಮಾಫಿಯಾ ಇದರ ಹಿಂದೆ ಇರುವ ಕೈವಾಡ ಅನಾವರಣವಾಗುತ್ತೆ. ಹೌದು ಗೃಹ ಬಳಕೆಗೆ ಅಂತಾ ಮೀಸಲಿರಿಸಿರುವ ಅನಿಲ ಸಿಲಿಂಡರ್ ಆಟೊ ರಿಕ್ಷಾಗಳಿಗೆ ರೀ-ಫಿಲ್ಲಿಂಗ್ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ,
ಎಲ್ಲೆಲ್ಲಿ ನಡೆಯುತ್ತೆ ಅಕ್ರಮ?
ದಾವಣಗೆರೆ ನಗರದ ಹಲವೇಡೆ ಯಾರ ಬಯವಿಲ್ಲದೆ ಹಾಡು ಹಗಲೇ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಗ್ಯಾಸ್ ರಿಫಿಲ್ಲಿಂಗ್, ನಗರದ ಇಮಾಮಂ ನಗರ, ಎಸ್.ಎಂ.ಕೃಷ್ಣ ನಗರ, ಗಾಂಧಿನಗರ, ಇಸ್ಲಾಂಪೇಟೆ, ಕೆಟಿಜೆ ನಗರ, ಅಜಾದ್ ನಗರ ಸೇರಿದಂತೆ ಅನೇಕ ಕಡೆ ಈ ದಂದೆ ನಡೆಯುತ್ತಿದೆ. ಈ ಪ್ರದೇಶಗಳಲ್ಲಿ ಗ್ಯಾಸ್ ರೀ-ಫಿಲ್ಲಿಂಗ್ ಅನೇಕ ಕುಟುಂಬಗಳ ಪ್ರಮುಖ ಉದ್ಯೋಗವೇ ಆಗಿದೆ ಎಂಬಂತಿದೆ.
ಈ ಅಕ್ರಮದ ಬಗ್ಗೆ ತಿಳಿದುಕೊಳ್ಳಲು ಹೋದಾಗ ಸ್ಥಳದಲ್ಲಿ ದೈರ್ಯವಾಗಿ ಗ್ಯಾಸ್ ರೀಫಿಲ್ ಮಾಡಲಾಗುತ್ತಿತ್ತು. ಸ್ಥಳದಲ್ಲಿ ಗ್ಯಾಸ್ ರಿಫಿಲ್ಲಿಂಗ್ ಮಾಡಲು ಎಕ್ಸ್‌ಚೇಂಜ್ ಪೈಪ್, ಒಂದು ಡಿಜಿಟಲ್ ತೂಕದ ಮಿಷನ್, 14.5 ಕೆ.ಜಿ.ತೂಕದ ವಿವಿಧ ಕಂಪನಿಯ 10 ಸಿಲಿಂಡರ್, ಬ್ಯಾಟರಿಗೆ ಕನೆಕ್ಷನ್ ಮಾಡುವ ಕೇಬಲ್ ಹಾಗೂ ಒಂದು ಮೊಟಾರ್ ಬಳಸಿಕೊಂಡು ವ್ಯವಹಾರ ನಡೆಸಲಾಗುತ್ತಿತ್ತು.
ಗ್ಯಾಸ್ ಸಿಲಿಂಡರ್ ಹೇಗೆ ತರ್ತಾರೆ?
ಮಾಹಿತಿ ಪ್ರಕಾರ ಗೃಹ ಬಳಕೆ ಸಿಲಿಂಡರ್ ಹೆಚ್ಚಿನ ದರಕ್ಕೆ ಮನೆ ಮನೆಗಳಿಂದ ತಲಾ 950 ರೂಪಾಯಿಗೆ ಒಂದರಂತೆ ಒಂದು ಆಟೋದಲ್ಲಿ ಒಂದು ಭಾರಿ 8 ಸಿಲಿಂಡರ್ ತರ್ತಾರಂತೆ. ಪ್ರತಿ ದಿನ ಮೂರು ಪಾಳಯದಲ್ಲಿ ಒಟ್ಟು 30 ಕ್ಕೂ ಹೆಚ್ಚು ಸಿಲಿಂಡರ್ ಅನ್ನು ಅಕ್ರಮ ದಂಧೆಗೆ ಬಳಸಲಾಗುತ್ತದೆ. ಒಂದು ಪಾಯಿಂಟ್ ನಲ್ಲಿ ಒಂದು ದಿನಕ್ಕೆ 30 ಸಿಲಿಂಡರ್ ಅಂದ್ರೆ ನಗರದಲ್ಲಿ ಪ್ರತಿನಿತ್ಯ ಸುಮಾರೂ 200 ಕ್ಕೂ ಅಧಿಕ ಸಿಲಿಂಡರ್ ಬ್ಲಾಕ್ ನಲ್ಲಿ ಅಕ್ರಮಕ್ಕೆ ಬಳಕೆಯಾಗುತ್ತವಂತೆ. ಈ ಎಲ್ಲಾ ಸಿಲಿಂಡರ್ ನಿಂದ ಅಕ್ರಮವಾಗಿ ಆಟೋಗಳಿಗೆ, ಚಿಕ್ಕ ಚಿಕ್ಕ ಸಿಲಿಂಡರ್ ಗಳಿಗೆ ತುಂಬಲಾಗುತ್ತೆ. ಇವರ ಕೆಲಸ ಪ್ರತಿ ದಿನ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ನಡೆಯುತ್ತಂತೆ.
ಪ್ರತಿ ನಿತ್ಯ ದಾವಣಗೆರೆಯಲ್ಲಿ ಸಾವಿರಾರು ಗ್ಯಾಸ್ ಆಟೋಗಳು ಸಂಚರ ಮಾಡುತ್ತವೆ, ಇವುಗಳಿಗೆ ಗ್ಯಾಸ್ ಬಂಕ್‌ನಲ್ಲಿ ತುಂಬಿಸಿದ್ರೆ ಮೈಲೆಜ್ ಬರೋದಿಲ್ಲವಂತೆ ಹಾಗಾಗಿ ಗೃಹ ಬಳಕೆಯ ಅನಿಲವನ್ನ ಈ ರೀತಿ ತಮ್ಮ ಆಟೋಗಳಿಗೆ ಬಳಸುತ್ತಾರೆ. ಒಂದು ಕೆಜಿಗೆ ರೂ 85 ರಂತೆ ಕೆಲವರು 2,3,4, ಕೆಜಿಯಂತೆ ತಮ್ಮ ಬಳಕೆಗೆ ಅನುಗುಣವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡಿಸಿಕೊಳ್ಳಲು ಬರ್ತಾರೆ. ಅಕ್ರಮ ನಡೆಸುವವರು ಒಂದು ಸಿಲಿಂಡರ್ ನಿಂದ ಏನಿಲ್ಲವೆಂದರೆ 400-500 ರೂಪಾಯಿ ಲಾಭಗಳಿಸುತ್ತಾರೆ, ದಿನಕ್ಕೆ 30 ಸಿಲಿಂಡರ್ ಅಂದರೆ 10 ರಿಂದ 15 ಸಾವಿರದವರೆಗೆ ದುಡಿಯುತ್ತಾರಂತೆ.
ಅಕ್ರಮಕ್ಕೆ ಪ್ರಭಾವಿಗಳ ಅಭಯ?
ರಾಜಾ ರೋಷವಾಗಿ ಅಕ್ರಮ ನಡೆಸಬೇಕಾದರೆ ಬಲಾಡ್ಯ ವ್ಯಕ್ತಿಗಳ ಬಾಹ್ಯ ಬೆಂಬಲವಿರಲೇಬೇಕು. ದಾವಣಗೆರೆಯ ಹಳೇ ಭಾಗದಲ್ಲಿ ಹೆಚ್ಚಾಗಿ ಬಡ ಕೂಲಿ ಕಾರ್ಮಿಕರೇ ಹೆಚ್ಚು.ಇವರನ್ನ ತಮ್ಮ ಅಕ್ರಮದ ವಹಿವಾಟಿಗೆ ಬಳಸಿಕೊಂಡು ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಆದರೆ ಪ್ರತಿನಿತ್ಯ ತಮ್ಮ ಮನೆ ನಿರ್ವಹಣೆಗೆ ಇಂತಹ ಅಕ್ರಮ ಕೆಲಸಕ್ಕೆ ಬರ್ತಾರೆ. ಆದ್ರೆ ಏನಾದರೂ ಹೆಚ್ಚು ಕಮ್ಮಿ ಆದರೆ ಯಾರು ಹೊಣೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಯಾರಾದರೂ ಈ ರಿತೀಯ ಅಕ್ರಮ ಕೇಳೊಕೆ ಹೋದರೆ ಕೆಲವರಿಂದ ಪೋನ್ ಗಳು ಬರ್ತಾವಂತೆ. ಹಾಗಾಗಿ ಪೊಲೀಸರೂ ಅಸಹಾಯಕರಾಗಿದ್ದಾರೆ ಎನ್ನುತ್ತಿದ್ದಾರೆ ಸಾರ್ವಜನಿಕರು.
ಈ ಹಿಂದೆಲ್ಲಾ ಕದ್ದು ಮುಚ್ಚಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಯುತಗತಿತ್ತು, ಆದರೆ ಇದೀಗ ಎಲ್ಲಾ ಖುಲ್ಲಂ ಖುಲ್ಲಾ. ಕೆಲವೊಮ್ಮೆ ಒಂದೊ ಎರಡೋ ಕೇಸ್ ಮಾಡಿದ್ರೆ ಮುಗೀತು. ನಂತರ ಮತ್ತೆ ಯಥಾವತ್ತಾಗಿ ನಡೆಯುತ್ತೆ ದಂಧೆ. ಆಹಾರ ಇಲಾಖೆ, ಪೋಲಿಸ್ ಗಸ್ತು ತಿರುಗುವ ಅಧಿಕಾರಿ-ಸಿಬ್ಬಂದಿಗೆ ಈ ಅಕ್ರಮ ಗೊತ್ತಾಗಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.