ದೆಹಲಿ: ಪುರಾಣ ಪ್ರಸಿದ್ದ, ಚಿಕ್ಕಮಗಳೂರಿನ ದತ್ತಪೀಠ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯುಂಟಾಗಿದೆ. ದತ್ತ ಪೀಠದಲ್ಲಿನ ಕೈಂಕರ್ಯಕ್ಕೆ ಮುಸ್ಲಿಂ ಮೌಲ್ವಿಯನ್ನು ನೇಮಕ ಮಾಡಿರುವ ಹಿಂದಿನ ಸರ್ಕಾರದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಕುರಿತ ತೀರ್ಪು ಹಿಂದೂ ಸಂಘಟನೆಗಳಲ್ಲಿ ಹರ್ಷ ಮೂಡಿಸಿದೆ. ಹೈಕೋರ್ಟಿನ ಈ ತೀರ್ಪನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ವಾಗತಿಸಿದ್ದಾರೆ. ಚತ್ತೀಸ್‌ಗಡದಲ್ಲಿ ಸಂಘಟನಾ ಪ್ರವಾಸದಲ್ಲಿರುವ ಸಿ.ಟಿ.ರವಿ ಹೈಕೋರ್ಟ್ ತೀರ್ಪು ಕುರಿತಂತೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹಿಂದೂಗಳ ಪವಿತ್ರ ಕ್ಷೇತ್ರ ಶ್ರೀ ಗುರು ದತ್ತಾತ್ರೇಯ ಪೀಠದ ಪೂಜೆಗೆ ನಾಗಮೋಹನ್ ದಾಸ್ ವರದಿ ಅನ್ವಯ ಮುಸ್ಲಿಂ ಮುಜಾವರ್‌ರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018 ಮಾರ್ಚ್ 19ರಂದು ಆದೇಶ ಹೊರಡಿಸಿದ್ದರು. ಮೌಲ್ವಿ ನೇಮಕ ಆದೇಶ ರದ್ದು ಮಾಡಿ ಇಂದು ಹೈಕೋರ್ಟ್ ನೀಡಿರುವ ತೀರ್ಪುನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ರದ್ದು ಮಾಡಿರುವ ಹೈಕೋರ್ಟ್ ತೀರ್ಪಿಗೆ ಸಂತೋಷ ತಂದಿದೆ ಎಂದು ರವಿ ಸಂತಸ ಹಂಚಿಕೊಂಡಿದ್ದಾರೆ.
ನ್ಯಾಯಪೀಠದ ಆದೇಶದಿಂದ ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳ ಗೌರವವನ್ನು ಎತ್ತಿಹಿಡಿದಂತಾಗಿದೆ ಎಂದಿರುವ ಅವರು, ಮೌಲ್ವಿಯನ್ನು ದತ್ತಾತ್ರೇಯ ಪೀಠಕ್ಕೆ ನೇಮಿಸಿದ್ದು ಸರಿಯಾದ ಕ್ರಮವಾಗಿರಲಿಲ್ಲ. ಹೀಗಾಗಿ ಈ ನೇಮಕವನ್ನು ಪ್ರಶ್ನಿಸಿ ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಕಾನೂನು ಹೋರಾಟ ನಡೆಸಿದೆ. ಇದೀಗ ಹೈಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದ್ದು, ನ್ಯಾಯಾಂಗದ ಮೇಲಿನ ಭರವಸೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.