ಬೆಂಗಳೂರು: ಚಿಕ್ಕಮಗಳೂರಿನ ಪವಿತ್ರ ಚಂದ್ರದ್ರೋಣ ಪರ್ವತದಲ್ಲಿರುವ ಪುರಣ ಪ್ರಸಿದ್ದ ದತ್ತಪೀಠ ವಿವಾದ ಸಂಬಂಧ ಮಹತ್ವದ ತೀರ್ಪು ಪ್ರಕಟವಾಗಿದೆ.
ದತ್ತಾತ್ರೇಯ ಪೀಠದ ಪೂಜೆಗೆ ಮುಸ್ಲಿಂ ಮೌಲ್ವಿಯನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ಬು ಹೈಕೋರ್ಟ್ ಇಂದು ರದ್ದುಪಡಿಸಿದೆ.
ವಿವಾದಿತ ದತ್ತಪೀಠವು ಹಿಂದೂಗಳಿಗೆ ಸೇರಬೇಕೆ ಅಥವಾ ಬಾಬಾ ಬುಡನ್‌ಗಿರಿಯಲ್ಲಿ ಅಧಿಪತ್ಯ ಸ್ಥಾಪಿಸಿರುವ ಗುಂಪಿಗೆ ಸೇರಬೇಕೇ ಎಂಬ ಬಗ್ಗೆ ಬಹುಕಾಲದಿಂದ ವಿವಾದ ಇದೆ. ಈ ನಡುವೆ ದತ್ತ ಪೀಠದಲ್ಲಿ ಪೂಜೆ ಸಲ್ಲಸಲು ಹಿಂದಿನ ಸರ್ಕಾರವು ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್‌ರನ್ನು ನೇಮಕ ಮಾಡಿತ್ತು. ಸರ್ಕಾರದ ಈ ನಡೆ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಕುರಿತು ಸಲ್ಲಿಕೆಯಾಗಿದ್ದ ಧಾವೆ ಸಂಬಂಧ ಹೈಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದ್ದು, ದತ್ತ ಪೀಠದಲ್ಲಿ ಪೂಜೆ ಸಲ್ಲಿಸಲು ಸರ್ಕಾರವು ಮೌಲ್ವಿಯನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದಿದೆ. ಈ ಸಂಬಂಧ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಧಾರ್ಮಿಕ ದತ್ತಿ ಇಲಾಖೆಯ 2018 ಮಾರ್ಚ್ 19ರಂದು ಹೊರಡಿಸಿದ್ದ ಆದೇಶ ಅದಾಗಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದ ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿಯ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಇಂದು ತೀರ್ಪು ಪ್ರಕಟಿಸಿದ್ದು, ಕಾನೂನು ಪ್ರಕಾರವೇ ಹೊಸದಾಗಿ ನೇಮಕ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.