ಬಿಜೆಪಿ ನಾಯಕ ಯಡಿಯೂರಪ್ಪ ಅವರು ರಾಜ್ಯ ರಾಜಕೀಯದಲ್ಲಿ ಅಜಾತ ಶತ್ರು. ಸಿದ್ದರಾಮಯ್ಯ, ಖರ್ಗೆ, ಡಿಕೆಶಿ, ದೇವೇಗೌಡರ ಸಹಿತ ಪ್ರಮುಖ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿದವರು. ಇದೀಗ, ಬಿಎಸ್‌ವೈ ರಾಜೀನಾಮೆ ನಂತರ ಅವರ ಆಪ್ತರು ಕೈ ನಾಯಕರಿಗೆ ಸಾಮಿಪ್ಯವಿರುವುದೇ ಆಚ್ಚರಿಯ ವಿದ್ಯಮಾನ..
ಬೆಂಗಳೂರು: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಪಾಳಯದಲ್ಲಿ ನಿಗೂಢ ಬೆಳವಣಿಗೆಗಳು ನಡೆಯುತ್ತಲೇ ಇವೆ. ಅದರಲ್ಲೂ ಬಿಎಸ್‌ವೈ ಆಪ್ತರು ನಾಯಕರ ಬಗ್ಗೆ ಬೇಸರಗೊಂಡಿದ್ದಾರೆನ್ನಲಾಗಿದ್ದು ಕೆಲವರು ಪಕ್ಷ ತ್ಯಜಿಸಲು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಬಿಜೆಪಿ ಕಚೇರಿಯ ಮೊಗಸಾಲೆಯಲ್ಲಿ ಪ್ರತಿಧ್ವನಿಸುತ್ತಿದೆ.
ಈ ನಡುವೆ ಬಿಎಸ್‌ವೈ ಅವರ ಆಪ್ತ ಶಾಸಕ ಸುರೇಶ್ ಗೌಡ ಅವರ ನಡೆಯಂತೂ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ತುನಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಗೌಡ ರಾಜೀನಾಮೆ ನೀಡಿದ್ದು, ಕ್ಷೇತ್ರದ ಪ್ರವಾಸ, ಕಾರ್ಯಕ್ರಮಗಳಲ್ಲಿ ಹೆಚ್ಚು ಸಕ್ರಿಯವಾಗುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅದೇ ಹೊತ್ತಿಗೆ ಕೈ ನಾಯಕರಿಂದ ಕುತೂಹಲಕಾರಿ ಮಾಹಿತಿ ಕೇಳಿಬಂದಿದೆ. ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂದು ಕೈ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಸ್ಪೋಟಕ ಹೇಳಿಕೆಯೊಂದನ್ನು ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್ ಗೌಡ ರಾಜಿನಾಮೆ ವಿಚಾರ ಕುರಿತಂತೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ, ಕಾಂಗ್ರೆಸ್ ಮುಖಂಡರ ಜೊತೆ ಸುರೇಶ್ ಗೌಡ ಮಾತುಕತೆ ನಡೆಸಿರುವ ಬಗ್ಗೆ ಹೇಳಿಕೊಂಡರಲ್ಲದೆ, ಮುಂದೆ ಅಚ್ಚರಿಯ ಬೆಳವಣಿಗೆ ಸಾಧ್ಯತೆಗಳ ಸುಳಿವು ನೀಡಿದರು.
ಬೆಂಗಳೂರಿನ ‘ಕಾಫಿ ಡೇ’ನಲ್ಲಿ ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಶಾಸಕ ಸುರೇಶ್ ಗೌಡರು ಭೇಟಿ ಮಾಡುತ್ತಿದ್ದರು. ಕಾಂಗ್ರೆಸ್ ಮುಖಂಡರ ಜೊತೆ ಸುರೇಶ್ ಗೌಡರು ಮಾತುಕತೆ ನಡೆಸಿದ್ದಾರೆ. ನಿರಂತರವಾಗಿ ಕಾಂಗ್ರೆಸ್ ಮುಖಂಡರ ಜೊತೆ ಒಡನಾಟದಲ್ಲಿದ್ದರು ಎಂದು ರಾಜಣ್ಣ ಹೇಳಿದರು.
ಸುರೇಶ್ ಗೌಡರಿಗೆ ಅವರದ್ದೇ ಆದ ತೇಜಸ್ಸು ಇದೆ. ಅವರೇ ಸ್ವಯಂಪ್ರೇರಿತರಾಗಿ ರಾಜಿನಾಮೆ ನೀಡಿದ್ದಾರೆ. ಕ್ಷೇತ್ರದ ಜನತೆ ಜೊತೆ ಹೆಚ್ಚಿನ ಕಾಲ ಕಳೆಯಬೇಕೆಂದು ಕಾರಣ ಕೊಟ್ಟಿದ್ದಾರೆ. ಕೇವಲ ಅಷ್ಟೇ ಅಲ್ಲದೇ ಅವರ ರಾಜಿನಾಮೆಗೆ ಬೇರೆ ಬೇರೆ ಕಾರಣ ಇರಬಹುದು ಎಂದು ರಾಜಣ್ಣ ಹೇಳಿದರು.
ನಮ್ಮ ಅವರ ನಡುಗೆ ವಿಶ್ವಾಸ, ಗೆಳತನ ಇದೆ. ಬಹಳಷ್ಟು ವಿಚಾರವನ್ನ ನಮ್ಮ ಮುಂದೆ ಹಂಚಿಕೊಂಡಿದ್ದಾರೆ. ಚುನಾವಣೆಯ ಸಮೀಪದಲ್ಲಿ ಈ ರೀತಿ ಬದಲಾವಣೆ ಆಗೋದು ಸಹಜ ಎಂದ ರಾಜಣ್ಣ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬರಲ್ಲ ಎಂಬುದು ಗೊತ್ತಾಗಿದೆ.ಹಾಗಾಗಿ ಬಿಜೆಪಿಯಲ್ಲಿ ಇರೋದುಕ್ಕೆ ಯಾರು ತಾನೆ ಒಪ್ಪುತ್ತಾರೆ ಎಂದರು.
ಬಿಜೆಪಿಯಲ್ಲಿ ಅಧಿಕಾರ ಇರೋವರೆಗೂ ಅಲ್ಲಿರ್ತಾರೆ, ಮುಗಿದ ಮೇಲೆ ಕಾಂಗ್ರೆಸ್ ಮುಂದೆ ಕ್ಯೂ ನಿಲ್ತಾರೆ. ಸುರೇಶ್ ಗೌಡ ಕಾಂಗ್ರೆಸ್‌ಗೆ ಬರುವ ಬಗ್ಗೆ ಒಂದು ವರ್ಷದ ಹಿಂದೆಯೇ ನಾನು ಹೇಳಿದ್ದೆ. ಅದು ಈಗೀಗ ಸತ್ಯ ಆಗ್ತಿವೆ ಎಂದವರು ಹೇಳಿದರು.