ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ತಡೆಗಟ್ಟಲು ಹೆಚ್ಚು ಲಸಿಕೆ ಪೂರೈಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಕರ್ನಾಟಕ ಸೇರಿದಂತೆ 11 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡ ಸಚಿವರು, ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ವಿವರಿಸಿದರು. ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಂಡ ಕ್ರಮ, ಪರೀಕ್ಷೆ ಹೆಚ್ಚಳ ಸೇರಿದಂತೆ ಕೋವಿಡ್ 2 ನೇ ಅಲೆ ತಡೆಯಲು ಕೈಗೊಂಡ ಕ್ರಮಗಳ ಕುರಿತು ಸಚಿವರು ಸಭೆಗೆ ವಿವರಿಸಿದರು.
ಕೆಲ ಸಂದರ್ಭಗಳಲ್ಲಿ ಕಡಿಮೆ ಲಸಿಕೆಯಿಂದಾಗಿ ಕೋವಿಡ್ ಲಸಿಕೆ ಅಭಿಯಾನವನ್ನು ನಿಧಾನ ಮಾಡಬೇಕಾಯಿತು. ಆದ್ದರಿಂದ ಕೇಂದ್ರದಿಂದ ಹೆಚ್ಚು ಲಸಿಕೆ ಲಭ್ಯವಾಗಿಸಬೇಕು. ಕೊರೊನಾ ನಿಯಂತ್ರಣಕ್ಕೆ ಪೂರಕವಾಗಿ ಆಕ್ಸಿಜನ್ ಹೆಚ್ಚು ಉತ್ಪಾದನೆಯಾಗುವಂತೆ ಕ್ರಮ ವಹಿಸಬೇಕು. ಚಿತ್ರಮಂದಿರ, ಅಂತಾರಾಜ್ಯ ಪ್ರಯಾಣ, ಸಮಾರಂಭಗಳಲ್ಲಿ ಜನಸಂಖ್ಯೆ ಮಿತಿ ಮೊದಲಾದವುಗಳಲ್ಲಿ ದೇಶಾದ್ಯಂತ ಒಂದೇ ಮಾರ್ಗಸೂಚಿ ನೀಡಬೇಕು. ಇದರಿಂದಾಗಿ ಯಾವುದೇ ಗೊಂದಲ ಉಂಟಾಗುವುದಿಲ್ಲ. ನಿಯಮಗಳಲ್ಲಿ ದೇಶಾದ್ಯಂತ ಏಕರೂಪತೆ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಆದ್ದರಿಂದ ಎಲ್ಲ ಕೋವಿಡ್ ಪೀಡಿತ ರಾಜ್ಯಗಳಿಗೆ ಒಂದೇ ರೀತಿಯ ನಿಯಮ ರೂಪಿಸಬೇಕು. ಇದರಿಂದಾಗಿ ಜನತೆಗೆ ಕೋವಿಡ್ ನ ಗಂಭೀರ ಸ್ವರೂಪದ ಬಗ್ಗೆ ಅರಿವು ಬರಲಿದೆ ಎಂದು ಸಚಿವರು ಕೋರಿದರು.
ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 1.15 ಲಕ್ಷದಿಂದ 1.25 ಲಕ್ಷದಷ್ಟು ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಏಪ್ರಿಲ್ 5 ಗೆ ಅಂತ್ಯಗೊಂಡಂತೆ, 2,19,87,431 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 1,77,66,796 (ಶೇ.95) ಆರ್ ಟಿಪಿಸಿಆರ್ ಪರೀಕ್ಷೆಯಾಗಿದೆ ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ 1.24% ರಷ್ಟಿದೆ. ಮಾಚ್ 1 ರಿಂದ ಈ ದರ 0.47% ರಷ್ಟಿದೆ. ಬೆಂಗಳೂರಿನಲ್ಲಿ 1.03% ದರವಿದ್ದು, ಮಾರ್ಚ್ 1 ರಿಂದ 0.42% ರಷ್ಟಿದೆ ಎಂದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೋವಿಡ್ ನಡವಳಿಕೆಗಳನ್ನು ಜಾರಿ ಮಾಡಲಾಗಿದೆ. ಮಾಸ್ಕ್ ಧರಿಸುವುದು, ಭೌತಿಕ ಅಂತರದ ನಿಯಮ ಪಾಲಿಸಲಾಗುತ್ತಿದೆ. ಮಾರ್ಸ್ ಧರಿಸದೇ ನಿರ್ಲಕ್ಷ್ಯ ತೋರುವವರಿಗೆ 250 ರೂ. ದಂಡ ವಿಧಿಸಲಾಗುತ್ತಿದೆ. ಎರಡನೇ ಅಲೆ ತಡೆಗಟ್ಟಲು ಸೂಕ್ಷ್ಮ ಕಂಟೇನ್ಮೆಂಟ್ ವಲಯ ಗುರುತಿಸಲಾಗಿದೆ. 5 ಕ್ಕಿಂತ ಹೆಚ್ಚು ಪ್ರಕರಣ ಕಂಡುಬಂದ ಕಟ್ಟಡಗಳನ್ನು ಸೂಕ್ಷ್ಮ ಎಂದು ಘೋಷಿಸಲಾಗುತ್ತಿದೆ ಎಂದು ಹೇಳಿದರು.