(ವರದಿ: ಹೆಚ್.ಎಂ.ಪಿ ಕುಮಾರ್)
ದಾವಣಗೆರೆ: ಕೋವಿಡ್ ಲಸಿಕೆಯನ್ನು ಇದುವರೆಗೂ ಹಾಕಿಸಿಕೊಳ್ಳದ ಆರೋಗ್ಯ ಕ್ಷೇತ್ರ ಹಾಗೂ ಮುಂಚೂಣಿ ಕ್ಷೇತ್ರದ ಫಲಾನುಭವಿಗಳು ಕೂಡಲೆ ಸಂಬಂಧಪಟ್ಟ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ತಪ್ಪಿದಲ್ಲಿ ಸೂಕ್ತ ಶಿಸ್ತು ಕ್ರಮ ಎದುರಾಗಬಹುದು.
ಈ ಸಂಬಂಧ ದಾವಣಗೆರೆ ಜಿಲ್ಲಾಧಿಕಾರಿ ನೀಡಿರುವ ಎಚ್ಚರಿಕೆ ರಾಜ್ಯದ ಆಡಳಿತವರ್ಗದಲ್ಲಿ ಸಂಚಲನ ಮೂಡಿಸಿದೆ.

ಕೊರೋನಾ ಲಸಿಕೆ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಸುಳ್ಳು ಸುದ್ದಿ ಪ್ರತಿಧ್ವನಿಸಿದ್ದರಿಂದಾಗಿ ಅನೇಕರು ಈ ಲಸಿಕೆ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬೆಳವಣಿಗೆ ಸರ್ಕಾರದ ವ್ಯವಸ್ಥೆಗೂ ಸವಾಲಾಗಿದೆ. ಈ ವಿದ್ಯಮಾನದ ಹಿನ್ನೆಲೆಯಲ್ಲೇ ಉನ್ನತಾಧಿಕಾರಿಗಳು ತಾವಾಗಿಯೇ ಲಸಿಕೆ ಹಾಕಿಸಿಕೊಂಡು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ನಡುವೆಯೇ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಪೈಕಿ ಯಾರು ಲಸಿಕೆ ಹಾಕಿಸಿಕೊಳ್ಳುವುದಿಲ್ಲವೋ ಅಂತಹವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಲಸಿಕೆ ಕಾರ್ಯಕ್ರಮದ ಪ್ರಗತಿ ಕುರಿತಂತೆ ಬುಧವಾರ ಆರೋಗ್ಯ ಇಲಾಖೆಯ ಆಯುಕ್ತರು ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸಿ ಸಮಾಲೋಚನೆ ನಡೆಸಿದರು. ಕೋವಿಡ್ ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿದ ಆರೋಗ್ಯ ಇಲಾಖೆ ಆಯುಕ್ತರಾದ ಡಾ. ತ್ರಿಲೋಕಚಂದ್ರ ಅವರು, ದಾವಣಗೆರೆ ಜಿಲ್ಲೆಯ ಪ್ರಗತಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದವರಿಗೆ ನೀಡಲಾದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ 18920 ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಬದಲಿಗೆ ಈವರೆಗೆ 9979 ಜನರು ಲಸಿಕೆ ಹಾಕಿಸಿಕೊಂಡಿದ್ದು, ಶೇ. 52.7 ಸಾಧನೆಯಾಗಿದೆ. ಎರಡನೇ ಹಂತದಲ್ಲಿ ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಅವರಿಗೆ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿತ್ತು. ಪೊಲೀಸ್ ಇಲಾಖೆಯ 2076 ಜನರಿಗೆ ಕೋವಿಡ್ ಲಸಿಕೆ ನೀಡಿಕೆಯ ಗುರಿಯ ಬದಲಿಗೆ ಕೇವಲ 629 ಜನ ಮಾತ್ರ ಪಡೆದಿದ್ದಾರೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 3413 ಜನರ ಪೈಕಿ 408. ನಗರಾಭಿವೃದ್ಧಿ ಇಲಾಖೆಯ 1644 ಜನರ ಪೈಕಿ 350 ಜನ ಮಾತ್ರ ಪಡೆದಿದ್ದಾರೆ. ಹೀಗಾಗಿ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧನೆ ತೃಪ್ತಿಕರವಾಗಿಲ್ಲ ಎಂಬ ಅಭಿಪ್ರಾಯ ಈ ವೀಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ವ್ಯಕ್ತವಾಯಿತು.
ಈ ವೀಡಿಯೋ ಕಾನ್ಫರೆನ್ಸ್ ಸಭೆಯ ನಂತರ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕೊರೋನಾ ಲಸಿಕೆ ವಿಚಾರದಲ್ಲಿ ಜಿಲ್ಲೆಯ ಕಳಪೆ ಸಾಧನೆಯನ್ನು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಬೊಟ್ಟು ಮಾಡಿದ್ದರೆಂಬ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದರು.
ಕೋವಿಡ್ ಲಸಿಕೆಗಾಗಿ ಗುರುತಿಸಲಾಗಿರುವ ಮೊದಲ ಹಾಗೂ ಎರಡನೆ ಹಂತದ ಫಲಾನುಭವಿಗಳು, ಇದುವರೆಗೂ ಲಸಿಕೆ ಪಡೆಯದೇ ಇದ್ದಲ್ಲಿ ಕೂಡಲೆ ಸಂಬಂಧಪಟ್ಟ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ಲಸಿಕೆ ಪಡೆಯದೇ ಇರುವ ಫಲಾನುಭವಿಗಳು ಒಂದು ವೇಳೆ ಕೋವಿಡ್ ಸೋಂಕಿಗೆ ಒಳಗಾದಲ್ಲಿ, ಅಂತಹವರು ತಮ್ಮ ಸ್ವಂತ ಖರ್ಚಿನಿಂದಲೇ ಚಿಕಿತ್ಸಾ ವೆಚ್ಚ ಭರಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ ಎಂಬುದಾಗಿ ಈಗಾಗಲೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಅದರಂತೆ ನಿಯಮ ಪಾಲಿಸಲಾಗುತ್ತದೆ ಎಂದರು.

























































