ಬೆಂಗಳೂರು: ಕಾಂಗ್ರೆಸ್ ಪಕ್ಷವು ಸರಕಾರ ರಚಿಸಿದ ತಕ್ಷಣವೇ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ “ಜಗನ್ನಾಥ ಭವನ”ದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ವಿದ್ಯುತ್ ಬಿಲ್, 2 ಸಾವಿರ ನೀಡಿಕೆ, 3 ಸಾವಿರ ಕೊಡುಗೆ ವಿಚಾರದಲ್ಲಿ ಜನರಲ್ಲಿ ಗೊಂದಲವಿದೆ. ಸರಕಾರ ರಚಿಸಿದ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಅದರ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ನೂತನ ಸರ್ಕಾರವು ತಕ್ಷಣ ಎಚ್ಚತ್ತುಕೊಂಡು ಬಿತ್ತನೆ ಬೀಜ, ಗೊಬ್ಬರ ಮತ್ತು ಕೃಷಿ ಸಾಲಕ್ಕೆ ಅರ್ಜಿ ಕರೆಯಬೇಕು ಎಂದು ತಿಳಿಸಿದರು. ಮಳೆ ಈಗಾಗಲೇ ವಿಳಂಬವಾಗಿದೆ. ಆದರೆ, ಕೃಷಿ ಚಟುವಟಿಕೆ ಆರಂಭವಾಗಬೇಕಿದೆ ಎಂದು ಅವರು ತಿಳಿಸಿದರು. ಕೂಡಲೇ ಕಾಂಗ್ರೆಸ್ ಪಕ್ಷವು ಸರಕಾರ ರಚಿಸಿ, ಜನತೆಗೆ ಮತ್ತು ಕೃಷಿ ಚಟುವಟಿಕೆಗೆ ಸಹಕರಿಸಬೇಕು. ಕೃಷಿ ಸಾಲ, ಬಿತ್ತನೆ ಬೀಜ ಮತ್ತು ಗೊಬ್ಬರ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರು ತಮ್ಮ ಕೊರತೆಗಳನ್ನು ಬಿಜೆಪಿ ಮೇಲೆ ಹೇರಲು ಮುಂದಾಗಿದ್ದರು. ತಮ್ಮ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಇದೀಗ ಶಾಸಕಾಂಗ ಪಕ್ಷದ ಸಭೆ ಕರೆದು ಒಂದು ಅಂತಿಮ ತೀರ್ಮಾನಕ್ಕೆ ಬಂದಿದೆ. ನಿಮ್ಮ ಕೊರತೆಯೇ ವಿಳಂಬಕ್ಕೆ ಕಾರಣ ಎಂದು ಟೀಕಿಸಿದ ಅವರು, ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ಬಿಡಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವು ರಾಜ್ಯ ಅಸೆಂಬ್ಲಿಯಲ್ಲಿ ಪೂರ್ಣ ಪ್ರಮಾಣದ ಬಹುಮತ ಪಡೆದು ಹಲವು ದಿನಗಳು ಕಳೆದರೂ ಮುಖ್ಯಮಂತ್ರಿ ಆಯ್ಕೆಯು ಕಗ್ಗಂಟಾಗಿತ್ತು. ಇವತ್ತು ಅದು ಬಗೆಹರಿದಂತೆ ಕಾಣುತ್ತಿದೆ. ಜನರು ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟಿದ್ದು ಬಿಜೆಪಿ ಅದನ್ನು ಸ್ವಾಗತಿಸುತ್ತದೆ ಎಂದು ತಿಳಿಸಿದರು.