ಸಿಎಂ ಯಾರಾಗಬೇಕು? ಯಾರಿಗಿದೆ ಯೋಗ..? ಯಾರಾಗುತ್ತಾರೆ ಯೋಗಿ..? ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ‘ರವಿ’ಗೆ ಪಟ್ಟ ಕಟ್ಟಬೇಕಿದೆ. ಲಿಂಗಾಯತರ ರೊಚ್ಚು ತಣ್ಣಗಾಗಿಸಲು ‘ಬೆಲ್ಲದ್’ ಅವರೇ ಗದ್ದುಗೆ ಏರಬೇಕಿದೆ. ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಅಂಗಳದಲ್ಲಿ ಕುತೂಹಲಕಾರಿ ಸಮೀಕ್ಷೆ..
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ತಿರುವುಗಳು ಕಾಣಸಿಗುತ್ತಿವೆ. ಸಿಎಂ ಯಡಿಯೂರಪ್ಪ ಅವರು ರಾಜೀನಾಮೆಗೆ ಸಿದ್ದವಾಗಿದ್ದು ಬೇರೊಬ್ಬರ ಆಯ್ಕೆಗೆ ಕಮಲ ಪಾಳಯದಲ್ಲಿ ಭರ್ಜರಿ ಕಸರತ್ತು ನಡೆದಿದೆ. ಜಾತೀವಾರು ವಿಚಾರದಲ್ಲಿ ಸಮುದಾಯ ಮಟ್ಟದಲ್ಲಿ ರಣತಂತ್ರ ರೂಪಿಸಲಾಗುತ್ತಿದ್ದರೆ, ಮತ್ತೊಂದು ಸಮುದಾಯದಲ್ಲಿ ಸ್ವಾಮಿಗಳೇ ಅಖಾಡಕ್ಕಿಳಿದು ರಣವ್ಯೂಹ ರಚಿಸಿರುವುದೇ ಕುತೂಹಲಕಾರಿ ವಿಚಾರ. ಹಾಗಾಗಿ ಇದೀಗ ಹೊಸ ಮುಖ್ಯಮಂತ್ರಿ ಯಾರಿಗೆ ಒಲಿಯಲಿದೆ ಎಂಬುದೇ ಈಗಿರುವ ಕುತೂಹಲ.
ಈ ಕುರಿತಂತೆ ಉದಯ ನ್ಯೂಸ್ ತಂಡ ಬಿಜೆಪಿ ಕಾರ್ಯಕರ್ತರ ಮಟ್ಟದಲ್ಲಿ, ಆರೆಸ್ಸೆಸ್ ವಲಯದಲ್ಲಿ ಹಾಗೂ ವಿವಿಧ ಸಮುದಾಯಗಳ ಸ್ವಾಮೀಜಿಗಳ ಅಭಿಪ್ರಾಯ ಸಂಗ್ರಹಿಸಿದಾಗ ಒಲವು ಸಿಕ್ಕಿರುವುದು ಹಲವರ ಬಗ್ಗೆ.
ಈ ಹಿಂದಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಈ ಬಾರಿಯದ್ದು ವಿಶೇಷ ಸನ್ನಿವೇಶ. ಈ ಹಿಂದೆ ಗದ್ದುಗೆಗಾಗಿ ಗುದ್ದಾಟ ನಡೆದಿದ್ದರೆ, ಈ ಬಾರಿ ಕುರ್ಚಿಗಾಗಿ ಬಿಎಸ್‌ವೈ ವಿರುದ್ದ ಯಾರೂ ಸಮರ ಸಾರಿಲ್ಲ. ಹಾಗಾಗಿ ನೂತನ ಸಾರಥಿಯ ಆಯ್ಕೆ ವರಿಷ್ಠರಿಗೆ ಸವಾಲೇನಲ್ಲ. ಈ ಕಾತಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ನಿರಾಳವಾಗಿಯೇ ಇದೆ.
ಪರ್ಯಾಯ ನಾಯಕತ್ವ ಬಗ್ಗೆ ಚಿತ್ತ ವಹಿಸಿರುವ ಬಿಜೆಪಿ ವರಿಷ್ಠರ ಬಳಿ ಮಾರುದ್ದದ ಪಟ್ಟಿಯೇ ಇದೆ. ಅದರಲ್ಲಿ ಪಕ್ಷನಿಷ್ಠ, ನಿಷ್ಕಳಂಕ, ಪ್ರಶ್ನಾತೀತ ನಾಯಕ ಯಾರು ಎಂಬ ಬಗ್ಗೆ ನಿರ್ಧರವಾಗುವುದಷ್ಟೇ ಬಾಕಿ. ಪ್ರಹ್ಲಾದ್ ಜೋಷಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಗೋವಿಂದ ಕಾರಜೋಳ, ಸಿ.ಟಿ.ರವಿ ಮೊದಲಾದ ಹೆಸರುಗಳು ಪ್ರಚಲಿತದಲ್ಲಿದೆಯಾದರೂ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಒಲವು ವಿಭಿನ್ನವಾಗಿದೆ.
ಪ್ರಲ್ಹಾದ್ ಜೋಷಿ:
ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಹೆಸರು ಹೊಸ ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿದೆಯಾದರೂ, ಅವರು ರಾಜ್ಯ ರಾಜಕಾರಣಕ್ಕೆ ಬರುವುದು ಸೂಕ್ತವಲ್ಲ ಎಂಬುದು ಹಲವಾರು ಕಾರ್ಯಕರ್ತರ ಅಭಿಪ್ರಾಯ. ರಾಜ್ಯ ರಾಜಕಾರಣಕ್ಕೆ ಬಂದು ತಮ್ಮ ಹೆಸರಿಗೆ ಕಳಂಕ ತಂದುಕೊಳ್ಳಬೇಡಿ ಎಂಬ ಸಂದೇಶ ಕಾರ್ಯಕರ್ತರದ್ದು.
ವಿಶ್ವೇಶ್ವರ ಹೆಗಡೆ ಕಾಗೇರಿ:
ಪ್ರಸಕ್ತ ವಿಧಾನಸಭಾಧ್ಯಕ್ಷರಾಗಿರುವ ಇವರು ರಾಜ್ಯಕಂಡ ಅಪರೂಪದ ರಾಜಕಾರಣಿ. ಭ್ರಷ್ಟಾತೀತ ನಾಯಕ. ಮುಂಬರುವ ಸವಾಲುಗಳನ್ನು ಎದುರಿಸಿ ನಿಭಾಯಿಸುವುದಾದರೆ ಇವರು ಸಿಎಂ ಆಗಲು ಸಮರ್ಥರು ಎಂಬುದು ಕಾರ್ಯಕರ್ತರ ಅಭಿಮತ.
ಸಿ.ಟಿ.ರವಿ:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಗ್ಗೆ ಬಿಜೆಪಿ ಹಾಗೂ ಆರೆಸ್ಸೆಸ್‌ನ ತಳಮಟ್ಟದ ಕಾರ್ಯಕರ್ತರಿಂದ ಒಲವು ವ್ಯಕ್ತವಾಗಿದೆ. ಸಂಘದ ಶಿಸ್ತಿನ ಸಿಪಾಯಿ. ಸಿದ್ದಾಂತ ಮೀರಿ ಹೋಗದ ಸೇನಾನಿ. ಹಿರಿಯರ ಮಾತು ಮೀರಿದ ಮಾತಿಲ್ಲ-ನಡೆಯಿಲ್ಲ. ಅಷ್ಟೇ ಅಲ್ಲ, ದತ್ತಪೀಠ ಸಹಿತ ಹಲವು ಹೋರಾಟಗಳಲ್ಲೂ ಸಾರಥ್ಯ ವಹಿಸಿದ ಹೆಗ್ಗಳಿಕೆ. ಅದರಲ್ಲೂ ತಾನಷ್ಟೇ ಅಲ್ಲ, ಪಕ್ಷವನ್ನೂ ಗೆದ್ದು ತರಿಸಬಲ್ಲ ಸಾಮರ್ಥ್ಯ ಸಿ.ಟಿ.ರವಿಗೆ ಇದೆ ಎಂಬ ಅಭಿಪ್ರಾಯ ಹೆಚ್ಚಿನವರದ್ದು. ತಮಿಳುನಾಡು, ಪಾಂಡೀಚೇರಿಯಲ್ಲಿ ಬಿಜೆಪಿ ಬಲಗೊಳಿಸಿದ ಕೀರ್ತಿಯನ್ನು ಗಮನಿಸಿದರೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸಲು ಸಿ.ಟಿ.ರವಿ ನೊಗ ಹೊರಬಲ್ಲರು ಎಂಬುದು ಬಹುತೇಕ ಕಾರ್ಯಕರ್ತರ ಅಭಿಮತ. ಇವರನ್ನು ಸಿಎಂ ಮಾಡಿದರೆ ಉತ್ತರಪ್ರದೇಶದಲ್ಲಿನ ಯೋಗಿ ಮಾದರಿಯಲ್ಲಿ ರಾಜ್ಯವೂ ಮಾದರಿಯಾಗಲಿದೆ ಎಂಬ ಮಾತುಗಳೂ ಕೇಳಿಬಂದವು.
ಪ್ರಸ್ತುತ ರಾಜಕೀಯವು ಸವಾಲಿನ ಹಾದಿ. ಮುಂದೆ ಡಿಕೆಶಿ ಪ್ರಭಾವ, ಸಿದ್ದರಾಮಯ್ಯ ಅವರ ಸವಾಲುಗಳನ್ನು ಎದುರಿಸಲು ಬಿಜೆಪಿಯಲ್ಲಿ ಇವರಿಗಿಂತ ಬೇರೆ ನಾಯಕರಿಲ್ಲ. ಅಷ್ಟೇ ಅಲ್ಲ, ಕರ್ನಾಟಕದ ದಕ್ಷಿಣದ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯವು ಜೆಡಿಎಸ್ ಜೊತೆ ಒಗ್ಗೂಡುತ್ತಿರುವಾಗ ಅದೇ ಸಮುದಾಯದ ಸಮರ್ಥ ನಾಯಕರಾಗಿರುವ ಸಿ.ಟಿ.ರವಿಗೆ ಅವಕಾಶ ಸಿಕ್ಕಿದರೆ, ರಾಜ್ಯದ ಪ್ರಬಲ ಸಮುದಾಯವೊಂದು ಬಿಜೆಪಿ ಜೊತೆ ಗಟ್ಟಿಯಾಗುತ್ತದೆ ಎಂಬ ಅಭಿಪ್ರಾಯವೂ ಸಿಕ್ಕಿದೆ. ಜೊತೆಗೆ, ಕರ್ನಾಟಕ ದಕ್ಷಿಣ ಪ್ರಾಂತದ ಸ್ವಾಮೀಜಿಗಳು ಕೂಡಾ ರವಿ ಹೆಸರಿನತ್ತ ಒಲವು ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕದ ಯೋಗಿ’:
ಈ ಹೆಸರು ಈ ವರೆಗೂ ಉತ್ತರ ಕರ್ನಾಟಕದಲ್ಲಿ ಪರಿಚಿತವಾಗಿತ್ತು. ಇದೀಗ ಇವರು ಇಡೀ ರಾಜ್ಯದಲ್ಲಿ ಕುತೂಹಲದ ಕೇಂದ್ರಬಿಂದು. ಮಾಜಿ ಎಂಎಲ್‌ಎ ಚಂದ್ರಕಾಂತ ಬೆಲ್ಲದ್ ಅವರ ಪುತ್ರರಾಗಿರುವ ಅರವಿಂದ್ ಬೆಲ್ಲದ್ ಒಬ್ಬ ಸಮರ್ಥ ಸಂಘಟಕರು. ಸಿ.ಟಿ.ರವಿ ರೀತಿಯಲ್ಲೇ ಸಂಘದ ಶಿಸ್ತಿನ ಸಿಪಾಯಿ. ಪ್ರಸ್ತುತ ರಾಜ್ಯ ಬಿಜೆಪಿ ನಾಯಕರ ನಡೆ-ನುಡಿ, ಕಳಂಕ-ಅಪವಾದಗಳ ಬಗ್ಗೆ ಅಳೆದು ತೂಗಿದರೆ ಪರಿಶುದ್ದತೆಗೆ ಹೆಸರಾದವರಲ್ಲಿ ಇವರೇ ಮುಂಚೂಣಿ ನಾಯಕ. ಇವರನ್ನು ‘ಕರ್ನಾಟಕದ ಯೋಗಿ’ ಎಂದವರೇ ಬಹುಪಾಲು ಮಂದಿ. ಒಂದು ವೇಳೆ ಇವರು ಸಿಎಂ ಆದರೆ ದೇಶದಲ್ಲೇ ಎರಡನೇ ಯೋಗಿ ಎಂದಾಗುವುದು ಖಚಿತ ಎಂಬ ಭಾವನೆ ಹಲವರದ್ದು. ಇದೇ ವೇಳೆ, ಬಹುತೇಕ ಲಿಂಗಾಯತ ಮಠಗಳ ಸ್ವಾಮೀಜಿಗಳು ಅರವಿಂದ್ ಬೆಲ್ಲದ್ ಅವರ ಆಯ್ಕೆಯನ್ನು ಎದುರು ನೋಡುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ:
ಸೌಮ್ಯ ಸ್ವಭಾವದ ನಾಯಕ, ರಾಜಕೀಯ ಪರಿಣಿತ. ಆದರೆ ಈವರೆಗೂ ಅವರು ಬಿಎಸ್‌ವೈ ಮಾತಿಗಷ್ಟೇ ಸೀಮಿತರಾಗಿದ್ದೇಕೆ ಎಂಬ ಮಾತುಕೇಳಿ ಬಂದಿದೆ. ಮೂಲ ಮೂಲ ಬಿಜೆಪಿ ಅಲ್ಲ. ಸಂಘದ ಬಗ್ಗೆ ಆಳ ನಂಟು ಇಲ್ಲ ಎಂಬುದೇ ಇವರಲ್ಲಿರುವ ಕೊರತೆ.
ಮುರುಗೇಶ್ ನಿರಾಣಿ:
ಮುರುಗೇಶ್ ನಿರಾಣಿಯವರು ತಮ್ಮ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಆದರೆ ಅವರು ಎಲ್ಲೆಡೆ ಉದ್ಯಮಿಯಾಗಿ ಗೋಚರಿಸುತ್ತಾರೆ. ಅವರು ಆರೋಪಗಳಿಂದ ಮೊದಲು ಮುಕ್ತವಾಗಬೇಕಿದೆ ಎಂಬುದು ಹಲವರ ಅಭಿಪ್ರಾಯ.
ಅಶ್ವತ್ಥನಾರಾಯಣ್:
ಇವರು ಡಿಸಿಎಂ ಸ್ಥಾನ ನಿರ್ವಹಿಸುತ್ತಿದ್ದಾರೆ. ಇವರು ಮಾತಿಗಷ್ಟೇ ಸೀಮಿತ. ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಇದಕ್ಕೆ ಉತ್ತರ. ಅಷ್ಟೇ ಅಲ್ಲ, ಆರೆಸ್ಸೆಸ್ ನಾಯಕ ಮಾತಿಗೆ ಇವರು ಬೆಲೆ ಕೊಡುತ್ತಿಲ್ಲ, ಮುಕುಂದ್, ಸಂತೋಷ್ ಹೇಳಿದರೂ ಇವರಿಂದ ಕೆಲಸ ಆಗುತ್ತಿಲ್ಲ. ಈ ಸರ್ಕಾರದಲ್ಲಿ ಕಾಸಿಲ್ಲದೆ ಕೆಲಸ ಆಗುವುದಿಲ್ಲವೇ? ಎಂಬ ಪ್ರಶ್ನೆ ಮೂಡುವಂತಿದ್ದರೆ ಅದಕ್ಕೆ ಇವರ ಕಾರ್ಯವೈಖರಿ ಕಾರಣ ಎಂಬ ಅಭಿಪ್ರಾಯ ಸಂಘ ಹಾಗೂ ಬಿಜೆಪಿ ವಲಯದಲ್ಲಿ ವ್ಯಕ್ತವಾಗಿದೆ.
ಬಸನಗೌಡ ಪಾಟೀಲ್ ಯತ್ನಾಳ್:
ಬಿಜೆಪಿಯಲ್ಲಿನ ಫೈರ್ ಬ್ರಾಂಡ್ ಈ ಯತ್ನಾಳ್. ಕಡ್ಡಿ ತುಂಡಾಗುವ ರೀತಿ ಥಟ್ ಅಂತ ಹೇಳಿ ಎದುರಾಳಿಗಳನ್ನು ಬಾಯಿ ಮುಚ್ಚಿಸುವ ಖಡಕ್‌ತನ. ನಾಯಕರ ವಿರುದ್ಧ ಬಹಿರಂಗ ವಾಗ್ಧಾಳಿ ಮಾಡುತ್ತರೆ ಎಂಬುದನ್ನು ಬಿಟ್ಟರೆ ಬೇರೆ ಅಪವಾದ ಇಲ್ಲ. ಜನಪ್ರತಿನಿಧಿಯಾಗಿ ಹಲವು ದಶಕಕಗಳ ಕಾಲ ಕೆಲಸ ಮಾಡಿದ್ದಾರೆ. ರಾಜ್ಯಾಧ್ಯಕ್ಷ, ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿರುವ ಇವರೂ ಯಾವುದರಲ್ಲೂ ಕಮ್ಮಿಯಿಲ್ಲ ಎಂಬುದು ಹಲವರ ಮಾತು.
ಗೋವಿಂದ ಕಾರಜೋಳ:
ಹಿರಿಯ ನಾಯಕ ಕಾರಜೋಳ ಅವರು ಬಿಜೆಪಿಯಲ್ಲಿನ ಅಪ್ಪಟ ಅಪರಂಜಿ. ಆದರೆ ಕ್ಲಿಷ್ಟಕರ ಪರಿಸ್ಥಿತಿ ನಿಭಾಯಿಸುವಲ್ಲಿ ಇವರೆಷ್ಟು ಸಮರ್ಥರಾಗುವರು ಎಂಬ ಕುತೂಹಲ ಹಲವರಲ್ಲಿದೆ.
ಲಕ್ಷ್ಮಣ್ ಸವದಿ:
ಈ ಹಿಂದೆ ಸೋತಿದ್ದರೂ ಅವರನ್ನು ಡಿಸಿಎಂ ಮಾಡಲಾಗಿದೆ. ಫಲಿತಾಂಶ ಏನು ಎಂಬ ಪ್ರಶ್ನೆಯೇ ಹಲವರದ್ದು.
ಇಲ್ಲಿದೆ ಅಚ್ಚರಿಯ ಹೆಸರುಗಳು:
ಈ ನಡುವೆ, ರಾಜ್ಯ ರಾಜಕೀಯದಲ್ಲಿ ಹೊಸ ಪ್ರಯೋಗ ನಡೆದರೆ ಚೆನ್ನಾಗಿರುತ್ತದೆ ಎಂದು ಹಲವರು ಹಲವು ಸಲಹೆಗಳನ್ನು ಮುಂದಿಟ್ಟಿದ್ದಾರೆ. ರಾಜ್ಯವನ್ನು ಕುಟುಂಬ ರಾಜಕಾರಣದಿಂದ ದೂರ ಇಡಬೇಕಿದ್ದರೆ ಪೂರ್ಣಾವಧಿ ಕಾರ್ಯಕರ್ತರನ್ನು ಸಿಎಂ ಮಾಡುವುದು ಉತ್ತಮ. ಹಾಗಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್.ಸಂತೋಷ್ ಅಥವಾ ಸಹ ಸರಕಾರ್ಯವಾಹ ಮುಕುಂದ್ ಅವರನ್ನು ಸಿಎಂ ಮಾಡಲಿ. ಹಿಂದೆ ಪ್ರಚಾರಕ್ ಆಗಿದ್ದ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಆಗಿಲ್ಲವೇ? ಅದೇ ರೀತಿ ರಾಜ್ಯದಲ್ಲೂ ಸಂಘದ ಪ್ರಚಾರಕರೇ ಸಿಎಂ ಆಗಬೇಕು ಎಂಬುದು ಹಲವರ ಅಪೇಕ್ಷೆ.