ಬೆಂಗಳೂರು ಗ್ರಾಮಾಂತರ ಜಿಲ್ಲೆ:- ಶಾಲಾಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಭವಿಷ್ಯ ಮುಖ್ಯವಾಗಿದ್ದು, ಹೆಚ್ಚು ಕಾಲ ಶಾಲೆ ಮುಚ್ಚಿದರೆ ದುಡಿಮೆಯತ್ತ ಮಕ್ಕಳು ವಾಲುವ ಸಾಧ್ಯತೆ ಹೆಚ್ಚಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಸಚಿವರು ಫೆಬ್ರವರಿ 22 ರಿಂದ 6 – 8ನೇ ತರಗತಿವರೆಗೂ ಶಾಲೆಗಳು ಪ್ರಾರಂಭವಾಗಿದ್ದು, ಪೋಷಕರ ಅನುಮತಿ ನೀಡಿದರೆ ಮಾತ್ರ ವಿದ್ಯಾರ್ಥಿಗಳು ಶಾಲೆಗೆ ಬರಬಹುದು ಎಂದು ತಿಳಿಸಿದರು.
ಬೆಂಗಳೂರು ನಗರ ಹಾಗೂ ಗಡಿ ಭಾಗದ ಶಾಲೆಗಳನ್ನು ಬಿಟ್ಟು ಉಳಿದೆಲ್ಲ ಭಾಗಗಳಲ್ಲಿ ಶಾಲೆಗಳು ಪ್ರಾರಂಭವಾಗಿದ್ದು, ಬಾಶೆಟ್ಟಿಹಳ್ಳಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿರುವುದು ಉತ್ತಮ ಬೆಳವಣಿಗೆ ಎಂದರು.
ರಾಜ್ಯದ ಎಲ್ಲ ಭಾಗಗಳಲ್ಲಿ ಶಾಲೆ ಪ್ರಾರಂಭಿಸುವಂತೆ ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂವಾದ ನಡೆಸಲು, ಪ್ರಶ್ನೆ ಕೇಳಲು ಆಗದಿರುವ ಕಾರಣ ಶಾಲೆಗೆ ಬಂದು ಕಲಿಯುವುದು ಉತ್ತಮ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಚಂದನ ಹಾಗೂ ದೂರದರ್ಶನದಲ್ಲಿ ಪಾಠವನ್ನು ಪ್ರಸಾರ ಮಾಡಲಾಗಿತ್ತು. ಕೆಲವು ಪ್ರದೇಶಗಳಲ್ಲಿ ವಿದ್ಯಾಗಮದ ಮೂಲಕ ವಿದ್ಯಾರ್ಥಿಗಳ ಬಳಿಯೇ ತೆರಳಿ ಪಾಠ ಮಾಡಲಾಗುತ್ತಿತ್ತು. ಆದರೆ ಕೆಲವೊಂದು ಕಾರಣಗಳಿಂದ ವಿದ್ಯಾಗಮ ಯೋಜನೆಯನ್ನು ನಿಲ್ಲಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯ ದೃಷ್ಟಿಯಿಂದ ಸಮಯ ಕಡಿಮೆ ಇದ್ದು, ವಿದ್ಯಾರ್ಥಿಗಳಿಗೆ ಹೊರೆ ಆಗದಂತೆ ಶೇ 30 ರಷ್ಟು ಪಠ್ಯವನ್ನು ಕಡಿತಗೊಳಿಸಲಾಗಿದೆ. ಕೆಲವು ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಪಠ್ಯ ಬೋಧನೆ ಮಾಡುವುದಾಗಿ ಶಿಕ್ಷಕರು ತಿಳಿಸಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ 8.50 ಲಕ್ಷ ವಿದ್ಯಾರ್ಥಿಗಳಲ್ಲಿ ಶೇ 98 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
ಪ್ರಸಕ್ತ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳಿಗೆ ಸವಾಲಿನ ವರ್ಷವಾಗಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ನೆನಪಿನಲ್ಲಿರುತ್ತದೆ ಎಂದು ಹೇಳಿದ ಸಚಿವರು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಆತಂಕ ಪಡುವ ಅಗತ್ಯವಿಲ್ಲ, ದೇಶದಲ್ಲಿ 6 ರಾಜ್ಯದಲ್ಲಿ ಕರೋನಾ 2ನೇ ಹಂತದ ಅಲೆ ಇದ್ದರೂ, ರಾಜ್ಯದಲ್ಲಿ ಎಲ್ಲೂ ವರದಿಯಾಗಿಲ್ಲ. ಕೋವಿಡ್ ನಿಯಂತ್ರಣದಲ್ಲಿ ದೇಶದಲ್ಲಿಯೇ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಾಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸುವಲ್ಲಿ ಯಾವುದೇ ರಾಜಿ ಮಾಡಿರುವುದಿಲ್ಲ. ಶಾಲೆ ಮುಚ್ಚಿದ್ದರ ಪರಿಣಾಮವಾಗಿ ಬಾಲಕಾರ್ಮಿಕತೆ ಮತ್ತು ಬಾಲ್ಯ ವಿವಾಹ ಹೆಚ್ಚಾಗಿರುವುದು ಗಮನಕ್ಕೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮೂಲಕ ಶಾಲಾ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 3000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಕೆಲವು ಭಾಗಗಳಲ್ಲಿ ನಿವೃತ್ತ ಶಿಕ್ಷಕರು ಸ್ವಯಂ ಪ್ರೇರಣೆಯಿಂದ ವಿದ್ಯಾರ್ಥಿಗಳಿಗೆ ಕಲಿಸಲು ಮುಂದೆ ಬಂದಿದ್ದಾರೆ. ಬಿಸಿ ಊಟ ನೀಡುವ ಸಂಬಂಧ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಅನುಮತಿ ಸಿಕ್ಕ ತಕ್ಷಣವೇ ಮಧ್ಯಾಹ್ನನದ ಬಿಸಿ ಊಟ ನೀಡಲಾಗುವುದು ಎಂದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ ಸಚಿವರು, ಪರೀಕ್ಷೆ ನಡೆಸುವ ಕುರಿತು ಪ್ರಶ್ನಿಸಿದಾಗ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದ ಎಂದರು. ಎಲ್ಲಾ ವಿದ್ಯಾರ್ಥಿಗಳು ಉಪಾಹಾರ ಸೇವಿಸಿ ಶಾಲೆಗೆ ಬರಬೇಕು ಯಾರು ಸಹ ಉಪವಾಸ ಬರಬಾರದು, ಆರೋಗ್ಯ ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಚಿವರು ಸಲಹೆ ನೀಡಿದರು.
10ನೇ ತರಗತಿ ವಿದ್ಯಾರ್ಥಿನಿ ವರ್ಷಿತಾ ಐಎಎಸ್ ಪರೀಕ್ಷೆ ಪಾಸಗಬೇಕೆಂಬ ಕನಸನ್ನು ಸಚಿವರ ಗಮನಕ್ಕೆ ತಂದಾಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬರುವಂತೆ ಸಚಿವರು ವಿದ್ಯಾರ್ಥಿನಿಗೆ ಶುಭ ಹಾರೈಸಿದರು.
ಬಳಿಕ, ಸಚಿವರು ಅಜಾಕ್ಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ನಿಂದ ಬಾಶೆಟ್ಟಿಹಳ್ಳಿಯಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಡಿಡಿಪಿಐ ಗಂಗಮಾರೇಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.