ಉಡುಪಿ: ಪಕ್ಕದಲ್ಲಿ ಅರಬ್ಬೀ ಸಮುದ್ರ ಇದ್ದರೂ ನೀರಿನ ದಾಹ ತಣಿಸಲಾಗದ ಪರಿಸ್ಥಿತಿ.. ಸುಭದ್ರ ಸರ್ಕಾರವಿದ್ದರೂ ಬಡಪಾಯಿ ಜನರದ್ದು ಪರದಾಡುವ ಸ್ಥಿತಿ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ದೂರ ಸಾಗಬೇಕಾದ ಜನರ ದುಸ್ಥಿತಿಯನ್ನು ಕಂಡ ಸಾಮಾಜಿಕ ಹರಿಕಾರ ಗೋವಿಂದ ಬಾಬು ಪೂಜಾರಿ, ತಾವೇ ಆ ಊರ ಜನರಿಗೆ ಜೀವಜಲ ಹರಿಸಿ ‘ಆಧುನಿಕ ಭಗೀರಥ’ ಎನಿಸಿದ್ದಾರೆ.
ಬಿರು ಬೇಸಿಗೆಯ ಸಂದರ್ಭದಲ್ಲಿ ಕುಂದಾಪುರ, ಬೈಂದೂರು ಸುತ್ತಮುತ್ತಲ ಊರುಗಳಲ್ಲಿ ಕುಡಿಯುವ ನೀರಿನ ಬವಣೆ ಇದೆ. ಬೇಸಿಗೆ ಶುರುವಾಯಿತೆಂದರೆ ಸಾಕು ಸಾವಿರಾರು ಜನ ಜೀವಜಲಕ್ಕಾಗಿ ಪಕ್ಕದ ಊರುಗಳನ್ನೇ ಅವಲಂಬಿಸಬೇಕಿದೆ. ಪ್ರಸ್ತುತ ಲಾಕ್‌ಡೌನ್ ಅವಧಿಯಲ್ಲಿ ಊರು ಸೇರಿದ್ದ ಬೆಂಗಳೂರಿನ ಖ್ಯಾತ ಆಹಾರೋದ್ಯಮಿ ಗೋವಿಂದ ಬಾಬು ಪೂಜಾರಿಗೆ ಈ ಜನರ ದುಸ್ಥಿತಿ ತಿಳಿದಿದ್ದೇ ತಡ, ಅವರು ಈ ಬಡಜನರ ನೆರವಿಗೆ ಧಾವಿಸಿದ್ದಾರೆ. ದುರ್ಬಲರ ನೆರವಿಗಾಗಿಯೇ ತಾವು ಸ್ಥಾಪಿಸಿರುವ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೀವಜಲ ಹರಿಸುವ ಕೆಲಸ ಮಾಡಿದ್ದಾರೆ.
ಮಂಗಳವಾರ ಶುಭ ಮಂಗಳ:
ಬೈಂದೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ತಾರಾವತಿ, ಆಳ್ವೆಕೋಡಿ, ಬೆಸ್ಕೂರು, ಸುಬ್ಬವಾಡಿ ಹಳ್ಳಿಗಳಲ್ಲಿನ ಸಾವಿರಾರು ಗ್ರಾಮಸ್ಥರ ಪಾಲಿಗೆ ಮೇ 12ರ ಮಂಗಳವಾರ ಶುಭದಿನ. ಗೋವಿಂದ ಬಾಬು ಪೂಜಾರಿಯವರ ನೆರವಿನ ಮೂಲಕ ಈ ಊರುಗಳ ಜನರಿಗೆ ಇದ್ದಕ್ಕಿದ್ದಂತೆ ಜಲಧಾರೆ ಹರಿದುಬಂತು. ಜನರ ಬವಣೆಯನ್ನು ಅರಿತು ನೀರು ಪೂರೈಕೆಯ ಯೋಜನೆಯನ್ನು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ರೂಪಿಸಿ, ಈ ಸೇವೆಯನ್ನು ಸರ್ಕಾರಕ್ಕೆ ಸಮರ್ಪಿಸಲಾಯಿತು. ನಗರಸಭೆಯ ಮುಖ್ಯಾಧಿಕಾರಿ ನವೀನ್ ಈ ಜಲವಿತರಣಾ ಕಾರ್ಯವನ್ನು ಉದ್ಘಾಟಿಸಿದರು.
ವಿವಿಧ ವಾಹನಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಯೋಜನೆ ಜಾರಿಗೊಳಿಸಿರುವ ಗೋವಿಂದ ಬಾಬು ಪೂಜಾರಿಯವರು, ಈ ಕೆಲಸಕ್ಕೆಂದು ತಮ್ನದೇ ಆದ ಯುವಕರ ಸೈನ್ಯ ಕಟ್ಟಿದ್ದಾರೆ. ನಿತ್ಯವೂ 300-350 ಮನೆಗಳಿಗೆ ನೀರು ಪೂರೈಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಮುಖ್ಯಾಧಿಕಾರಿ ನವೀನ್, ಅಗತ್ಯ ಸಂದರ್ಭದಲ್ಲಿ ಜೀವಜಲ ಒದಗಿಸಿದ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಕೆಲಸ ಪ್ರಶಂಸಾರ್ಹ ಎಂದರು. ಈ ಜನಪರ ಕಾರ್ಯ ಕೈಗೊಂಡ ಗೋವಿಂದ ಬಾಬು ಪೂಜಾರಿಯವರನ್ನು ಗ್ರಾಮಸ್ಥರ ಪರವಾಗಿ ಅಭಿನಂಧಿಸಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಗೋವಿಂದ ಬಾಬು ಪೂಜಾರಿ, ಕಳೆದ ವರ್ಷ ತಾವು ಊರಿಗೆ ಬಂದಾಗ ಬಿಜೂರು ಸುತ್ತಮುತ್ತಲ ಗ್ರಾಮಗಳಲ್ಲಿ ಇದೇ ರೀತಿ ನೀರಿನ ಬವಣೆ ಇದ್ದುದು ಗೊತ್ತಾಯಿತು. ಅಲ್ಲೂ ಇದೇ ರೀತಿ ಕುಡಿಯುವ ನೀರನ್ನು ಪೂರೈಸುವ ಕೆಲಸ ಮಾಡಿದೆವು. ಜನರ ಆಶೀರ್ವಾದದಿಂದಾಗಿ ಇದೀಗ ಬೈಂದೂರು ಸಮೀಪದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದರು.
ಯಾರು ಈ ಗೋವಿಂದ ಬಾಬು ಪೂಜಾರಿ..?
ಬೆಂಗಳೂರು ಮೂಲದ ಖ್ಯಾತ ಆಹಾರೋದ್ದಿಮೆ ಸಂಸ್ಥೆ ChefTalk ಕಂಪೆನಿಯ ಸಂಸ್ಥಾಪಕರಾಗಿರುವ, ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿಯವರು, ಮಹಾರಾಷ್ಟ್ರ, ಆಂಧ್ರ, ದೆಹಲಿ, ಗುಜರಾತ್, ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ತಮ್ಮ ಕಂಪೆನಿಯನ್ನು ವಿಸ್ತರಿಸಿ ಸುಮಾರು 6000 ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ.
ಇದೀಗ ಮೀನುಗಾರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಮತ್ಸ್ಯಬಂಧ ಯೋಜನೆ ರೂಪಿಸಿ, ಆ ಮೂಲಕ ಮೀನಿನ ಚಿಪ್ಸ್, ಖಾದ್ಯಗಳನ್ನು ತಯಾರಿಸುವ ಕಾರ್ಖಾನೆ ಆರಂಭಿಸಿದ್ದಾರೆ. ಕರಾವಳಿಯ ಯುವಜನರಿಗೆ ಉದ್ಯೋಗ ಕಲ್ಪಿಸಲು ರೆಸಾರ್ಟ್ ಸಹಿತ ಪ್ರವಾಸೋದ್ಯಮ ಯೋಜನೆಗೂ ಮುನ್ನುಡಿ ಬರೆದಿದ್ದಾರೆ. ಸ್ವ ಉದ್ಯೋಗ ಕೈಗೊಳ್ಳಲು ಬಯಸುವ ಮಂದಿಗೆ ಹಣಕಾಸಿನ ನೆರವು ಕಲ್ಪಿಸುವ ಉದ್ದೇಶದಿಂದ ಶ್ರೀ ನಾರಾಯಣಗುರು ಕೋ ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ. ಹತ್ತಾರು ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿರುವ ಇವರು, ಅನೇಕರಿಗೆ ವೈದ್ಯಕೀಯ ನೆರವು ನೀಡಿ ಆಪತ್ಪಾಂಧವನೆನಿಸಿದ್ದಾರೆ. ಮುಂದೆ ಆಧುನಿಕ ಸೌಲಬ್ಯದ ಶಿಕ್ಷಣ ಸಂಸ್ಥೆ ಆರಂಭಿಸಿ ಬಡ ಜನರಿಗೂ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಕೊಡಿಸುವ ಹೆಬ್ಬಯಕೆ ಗೋವಿಂದ ಬಾಬು ಪೂಜಾರಿ ಅವರದ್ದು.