ನವದೆಹಲಿ: 2026ರ ಜನವರಿಯಿಂದ ಮೇ 22ರವರೆಗೆ 19 ಸಿಆರ್‌ಪಿಎಫ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತವಾಗಿ ಪರಿಗಣಿಸಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಯ ಮಾನಸಿಕ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ವರದಿಯಲ್ಲಿರುವ ಅಧಿಕೃತ ಸಿಆರ್‌ಪಿಎಫ್ ಅಂಕಿಅಂಶಗಳ ಪ್ರಕಾರ, 2025ರಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕ ಸಂಖ್ಯೆಯಾಗಿದೆ. 2021ರಲ್ಲಿ 57, 2022ರಲ್ಲಿ 43, 2023ರಲ್ಲಿ 57 ಮತ್ತು 2024ರಲ್ಲಿ 46 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.
ಆಗಸ್ಟ್ 11ರಂದು ಪ್ರಕಟವಾದ ಮಾಧ್ಯಮ ವರದಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಒಟ್ಟು 281 ಸಿಆರ್‌ಪಿಎಫ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ ಸುಮಾರು 216 ಮಂದಿ ಕರ್ತವ್ಯದಲ್ಲಿದ್ದರು ಎಂದು ತಿಳಿಸಲಾಗಿದೆ.

ಎರಡು ವಾರಗಳಲ್ಲಿ ವರದಿ ಸಲ್ಲಿಸಲು ಸೂಚನೆ
ಅಂಕಿಅಂಶಗಳು ನಿಖರವಾಗಿದ್ದರೆ, ಸಿಆರ್‌ಪಿಎಫ್ ಸಿಬ್ಬಂದಿಯ ಜೀವಿಸುವ ಹಕ್ಕಿನ ಕುರಿತು ಗಂಭೀರ ಮಾನವ ಹಕ್ಕುಗಳ ಕಳವಳ ಎದುರಾಗುತ್ತದೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಸಿಆರ್‌ಪಿಎಫ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿರುವ ಆಯೋಗ, ಎರಡು ವಾರಗಳೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.
ಆತ್ಮಹತ್ಯೆಗಳಿಗೆ ಕಾರಣವಾದ ಪರಿಸ್ಥಿತಿಗಳು, ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ನೀಡುವಂತೆ ಎನ್‌ಎಚ್‌ಆರ್‌ಸಿ ಕೇಳಿದೆ.







































































