ನವದೆಹಲಿ: ಭಾರತದ ವಿಶೇಷ ಆರ್ಥಿಕ ವಲಯದಲ್ಲಿ (EEZ) ಆಳ ಸಮುದ್ರ ಮೀನುಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 9,650 ಉಚಿತ ಡಿಜಿಟಲ್ ಪ್ರವೇಶ ಪಾಸ್‌ಗಳನ್ನು ವಿತರಿಸಿದೆ. ಈ ಪೈಕಿ ಕರ್ನಾಟಕವೇ ಅತಿ ಹೆಚ್ಚು ಪಾಸ್‌ಗಳನ್ನು ಪಡೆದ ರಾಜ್ಯವಾಗಿದ್ದು, ಸಾಂಪ್ರದಾಯಿಕ ಮೀನುಗಾರರು, ಸಹಕಾರಿ ಸಂಸ್ಥೆಗಳು ಹಾಗೂ ಮೀನು ರೈತ ಉತ್ಪಾದಕ ಸಂಸ್ಥೆಗಳಿಗೆ (FFPOs) ಹೊಸ ಅವಕಾಶಗಳು ದೊರೆಯಲಿವೆ.
2025ರ ನವೆಂಬರ್‌ನಲ್ಲಿ ಅಧಿಸೂಚನೆಗೊಂಡ EEZ ನಿಯಮಗಳು, 2025ರಡಿ ReALCRaft ಪೋರ್ಟಲ್ ಮೂಲಕ ಈ ಪಾಸ್‌ಗಳನ್ನು ನೀಡಲಾಗುತ್ತಿದೆ. 12 ನಾಟಿಕಲ್ ಮೈಲುಗಳಾಚೆ ಹಾಗೂ 200 ನಾಟಿಕಲ್ ಮೈಲುಗಳವರೆಗೆ ಮೀನುಗಾರಿಕೆ ನಡೆಸುವ ಯಾಂತ್ರಿಕೃತ ಮೀನುಗಾರಿಕಾ ಹಡಗುಗಳಿಗೆ ಹಾಗೂ 24 ಮೀಟರ್‌ಗಿಂತ ಉದ್ದದ ದೊಡ್ಡ ಯಾಂತ್ರಿಕೃತ ದೋಣಿಗಳಿಗೆ ಪ್ರವೇಶ ಪಾಸ್ ಕಡ್ಡಾಯವಾಗಿದೆ. ಸಾಂಪ್ರದಾಯಿಕ ಮೋಟಾರು ರಹಿತ ಹಾಗೂ ಸಣ್ಣ ದೋಣಿಗಳಿಗೆ ವಿನಾಯಿತಿ ನೀಡಲಾಗಿದೆ.
ಆಳ ಸಮುದ್ರ ಮೀನುಗಾರಿಕೆಯನ್ನು ವಿಸ್ತರಿಸುವುದರ ಜೊತೆಗೆ ಮೀನು ಸಂಸ್ಕರಣೆ ಮತ್ತು ರಫ್ತು ಕ್ಷೇತ್ರದಲ್ಲಿ ಸಣ್ಣ ಮೀನುಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. 2026-27ರ ಕೇಂದ್ರ ಬಜೆಟ್‌ನಲ್ಲಿ EEZ ಮತ್ತು ಎತ್ತರದ ಸಮುದ್ರಗಳಲ್ಲಿ ಭಾರತೀಯ ಹಡಗುಗಳು ಹಿಡಿಯುವ ಮೀನುಗಳನ್ನು ಸುಂಕ ರಹಿತವಾಗಿ ವಿದೇಶಿ ಬಂದರುಗಳಲ್ಲಿ ಇಳಿಸುವುದಕ್ಕೆ ಸಂಬಂಧಿಸಿದ ಕ್ರಮಗಳನ್ನೂ ಘೋಷಿಸಲಾಗಿದೆ.

ಪ್ರವೇಶ ಪಾಸ್ ವ್ಯವಸ್ಥೆಯನ್ನು MPEDA ಹಾಗೂ EIC ವ್ಯವಸ್ಥೆಗಳೊಂದಿಗೆ ಸಂಪರ್ಕಿಸಲಾಗಿದ್ದು, ಮೀನುಗಾರಿಕೆ ಮತ್ತು ಆರೋಗ್ಯ ಪ್ರಮಾಣಪತ್ರ, ಪತ್ತೆಹಚ್ಚುವಿಕೆ ಹಾಗೂ ಪರಿಸರ ಲೇಬಲಿಂಗ್ ಪ್ರಕ್ರಿಯೆಗಳನ್ನು ಸುಗಮಗೊಳಿಸಲಿದೆ.
ಕರ್ನಾಟಕಕ್ಕೆ ಅತಿ ಹೆಚ್ಚು ಪಾಸ್
ಆಗಸ್ಟ್ 5, 2026ರ ಅಂಕಿಅಂಶಗಳ ಪ್ರಕಾರ ಕರ್ನಾಟಕಕ್ಕೆ 2,563 ಪಾಸ್‌ಗಳು ದೊರೆತಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಗುಜರಾತ್‌ಗೆ 2,524, ಆಂಧ್ರಪ್ರದೇಶಕ್ಕೆ 1,952, ಒಡಿಶಾಗೆ 887 ಮತ್ತು ಮಹಾರಾಷ್ಟ್ರಕ್ಕೆ 627 ಪಾಸ್‌ಗಳನ್ನು ನೀಡಲಾಗಿದೆ.
ಡಿಜಿಟಲ್ ವ್ಯವಸ್ಥೆಯನ್ನು ಉಪಗ್ರಹ ಆಧಾರಿತ ಹಡಗು ಟ್ರಾನ್ಸ್‌ಪಾಂಡರ್‌ಗಳು ಹಾಗೂ ‘ನಭಮಿತ್ರ’ ಆ್ಯಪ್‌ನೊಂದಿಗೆ ಸಂಯೋಜಿಸಲಾಗಿದ್ದು, ಮೀನುಗಾರರಿಗೆ ಹವಾಮಾನ ಮುನ್ಸೂಚನೆ, ಮೀನುಗಾರಿಕೆ ವಲಯದ ಮಾಹಿತಿ, ಚಂಡಮಾರುತ ಮತ್ತು ಸುನಾಮಿ ಎಚ್ಚರಿಕೆ ಹಾಗೂ ತುರ್ತು ಸಂವಹನ ಸೌಲಭ್ಯ ಒದಗಿಸಲಿದೆ.







































































