ಬಿಎಸ್‌ವೈ ಸಂಪುಟದ ಬಹುಪಾಲು ಸಚಿವರಿಗೀಗ ಸಿಡಿ ಚಕ್ರದ ಆತಂಕ.. ಇನ್ನೊಂದೆಡೆ ಜಾರಕಿಹೊಳಿ ಸಹೋದರರಿಗೀಗ ಆ ಮಹಿಳೆಯ ವಿರುದ್ಧ ಆಕ್ರೋಶ. ಸಿಬಿಐ ತನಿಖೆಗೂ ಆಗ್ರಹ.. ಇದೀಗ ಇಕ್ಕಟ್ಟಿನಲ್ಲಿ ಸಿಎಂ ಬಿಎಸ್‌ವೈ..
ಬೆಂಗಳೂರು: ಸಿಡಿ ವಿವಾದದ ಚಕ್ರದ ಸುಳಿಯಲ್ಲಿ ಸಿಲುಕುವ ಆತಂಕ ಹಲವರಲ್ಲಿದೆ. ಅದರಲ್ಲೂ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ನಂತರವಂತೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಿದೆ.
ಈ ನಡುವೆ ವಾರಾಂತ್ಯದ ರಜಾದಿನವಾದ ಭಾನುವಾರ ಈ ಸಿಡಿ ವಿವಾದಕ್ಕೆ ರೋಚಕತೆಯ ಟ್ವಿಸ್ಟ್ ಸಿಕ್ಕಿದ್ದು, ರಮೇಶ್ ಜಾರಕಿಹೊಳಿ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸರಿಗೆ ನೀಡಿದ್ದ ದೂರನ್ನು ಸಾಮಾಜಿಕ ಹೋರಾಟಗಾರರು ಹಿಂಪಡೆದಿದ್ದಾರೆ.
ಈ ಬೆಳವಣಿಗೆಯಿಂದಾಗಿ ರಮೇಶ್ ಜಾರಕಿಹೊಳಿ ಸ್ವಲ್ಪಮಟ್ಟಿಗೆ ನಿರಾಳರಾಗಿದ್ದಾರೆ. ಆದರೆ ಹೋದ ಮಾನ ಮರಳಿ ಬರುತ್ತದೆಯೇ ಎಂಬ ಪ್ರಶ್ನೆ ಬಿಜೆಪಿ ನಾಯಕರದ್ದು.
ಯಾರು ಆ ಮಹಿಳೆ?
ದಿನೇಶ್ ಕಲ್ಲಹಳ್ಳಿಯವರು ದೂರನ್ನು ಹಿಂಪಡೆದ ಸ್ವಲ್ಪ ಹೊತ್ತಿನಲ್ಲೇ ತುರ್ತು ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ ಸಹೋದರೂ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ, ಈ ಸಿಡಿ ಪ್ರಕರಣದ ಹಿಂದೆ ಪ್ರಭಾವಿ ಮಹಿಳೆಯ ಕೈವಾಡವಿದೆ ಎಂದು ಆರೋಪಿಸಿ ಒಟ್ಟಾರೆ ಪ್ರಕರಣದ ನಡುವೆ ಹೊಸ ಬಾಂಬ್ ಹಾಕಿದ್ದಾರೆ.
ವಿವಾದಿತ ವೀಡಿಯೋವನ್ನು ರಷ್ಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಇದಕ್ಕಾಗಿಯೇ 17 ಕೋಟಿ ರೂ ಖರ್ಚು ಮಾಡಿದ್ದಾರೆ. ಇದರ ಹಿಂದೆ ಮಹಿಳೆ ಇದ್ದಾರೆ. ಇದರ ಹಿಂದೆ ನಾಲ್ಕು ಜನ ಇದ್ದಾರೆ. ಈ ನಾಲ್ವರ ಹಿಂದೆ ಮೂವರ ಟೀಮ್ ಇದೆ. ಆ ಮಹಿಳೆ ಬಗ್ಗೆ ತನಿಖೆಯಾಗಬೇಕಿದೆ. ಅವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿರುವ ಬಾಲಚಂದ್ರ ಜಾರಕಿಹೊಳಿ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಸಹೋದರ ಬಾಲಚಂದ್ರ ಆರೋಪ: “ರಮೇಶ್ ಜಾರಕಿಹೊಳಿ ಹೆಸರನ್ನು ಹಾಳು ಮಾಡಲು ಷಡ್ಯಂತ್ರ ನಡೆದಿದೆ. ಇದರಲ್ಲಿ ಪ್ರಭಾವಿ ಮಹಿಳೆಯ ಪಾತ್ರವಿದೆ. ಇದಕ್ಕಾಗಿ 15 ಕೋಟಿ ರೂ ಖರ್ಚು ಮಾಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು.”
ಬೆಳಗಾವಿ ರಾಜಕಾರಣವಷ್ಟೇ ಅಲ್ಲ, ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಅತ್ಯಂತ ಪ್ರಭಾವಿ. ಹಿಂದಿನ ಸಮ್ಮಿಶ್ರ ಸರ್ಕಾರ ಪತನವಾಗಿದ್ದೂ ಈ ಕುಟುಂಬದ ಸಿಟ್ಟಿನಿಂದ. ಈಗಿನ ಸರ್ಕಾರವನ್ನೂ ನಡುಗಿಸುವ ತಾಕತ್ತು ಜಾರಕಿಹೊಳಿ ಗುಂಪಿಗೆ ಇದೆ. ಹೀಗಿರುವಾಗ ಸಿಎಂ ಯಡಿಯೂರಪ್ಪ ಅವರು ಜಾರಕಿಹೊಳಿ ಕುಟುಂಬದ ಆಗ್ರಹದಂತೆ ಈ ಪ್ರಕರಣವದ ತನಿಖೆಯನ್ನು ಸಿಬಿಐಗೆ ಒಪ್ಪಿಸುತ್ತಾರ? ಈ ಕುತೂಹಲಕಾರಿ ಸಂಗತಿಯತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ.