ಕೊಪ್ಪಳ: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಈ ಸಂಬಂಧ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೃಷಿ ಸಚಿವರೂ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಶಾಸಕರೆಲ್ಲರಿಗೂ ಸಚಿವರಾಗಬೇಕು ಎನ್ನುವ ಆಸೆ ಸಹಜವೇ. ಇದರಲ್ಲಿ ತಪ್ಪೇನಿಲ್ಲ. ಸಚಿವ ಸಂಪುಟವೋ ವಿಸ್ತರಣೆಯೋ ಎನ್ನುವುದು ವರಿಷ್ಠರಿಗೆ ಬಿಟ್ಟ ವಿಚಾರ. ಸಿಎಂ ಪರಮಾಧಿಕಾರ ಎಂದರು.
ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳಿಗೆ ಆದೇಶ ಮಾಡಿರುವುದು ಸ್ವಾಗತಾರ್ಹವಾಗಿದ್ದು, ಇದರಿಂದ ಮರಾಠ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳ ಹಿಂದುಳಿದವರಿಗೆ ಬಡವರಿಗೆ ಅನುಕೂಲವಾಗಲಿದೆ.ಇದು ಮರಾಠಿ ಭಾಷೆ ಪ್ರಾಧಿಕಾರ ಇದಲ್ಲ. ಕರ್ನಾಟಕದಲ್ಲಿರುವ ಮರಾಠಿಗರನ್ನು ಕರ್ನಾಟಕ ಬಿಟ್ಟು ಕಳುಹಿಸಲಾಗುವುದಿಲ್ಲ. ಮರಾಠರ ಅಭಿವೃದ್ಧಿಗಾಗಿ ಸರ್ಕಾರ ನಿಗಮ ಮಾಡಿದ್ದು ಸ್ವಾಗತಾರ್ಹ. ಅದರಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಡಿದ್ದು ಸಹ ಸರಿಯಾಗಿದೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ದೊಡ್ಡ ಸಮುದಾಯವಾಗಿದ್ದರೂ ಈ ಸಮುದಾಯದಲ್ಲಿ ಬಡವರು ಹಿಂದುಳಿದವರು ಇದ್ದಾರೆ. ನಿಗಮ ರಚನೆಯಿಂದ ಇವರಿಗೆ ಅನುಕೂಲವಾಗಲಿದೆ. ಇದೇ ರೀತಿ ಮರಾಠ ಅಭಿವೃದ್ಧಿ ನಿಗಮದಿಂದ ಮರಾಠಿಗರಲ್ಲಿರುವ ಬಡವರಿಗೆ ಹಿಂದುಳಿದವರಿಗೂ ಕೂಡ ಅನುಕೂಲವಾಗಲಿದೆ.ಕುಂಬಾರ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಬ್ರಾಹ್ಮಣ ನಿಗಮ, ಅಲ್ಪಸಂಖ್ಯಾತರಿಗೂ ನಿಗಮವಿದೆ ಎಂದರು.
ಓಲೈಕೆಗಾಗಿ ನಿಗಮ ರಚನೆ ಮಾಡಿರುವುದಲ್ಲ. ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮಾಜಿ ಸಂಸದ ಶಿವರಾಜ ತಂಗಡಗಿ ಅವರನ್ನು ತೃಪ್ತಿ ಮಾಡಲು ಚುನಾವಣಾ ಆಯೋಗ ವ್ಯವಸ್ಥೆ ಬದಲಾವಣೆ ಮಾಡುವ ಅವಶ್ಯಕತೆಯಿಲ್ಲ. ಉಪಚುನಾವಣೆ ಸೋಲಿಗೆ ಇವಿಎಂ ಯಂತ್ರ ಎನ್ನುವುದು ಕಾಂಗ್ರೆಸ್ ತನ್ನ ಸೋಲಿಗೆ ನೀಡುವ ಕಾರಣವಾಗಿದೆ. ಕಾಂಗ್ರೆಸ್ ನದ್ದು ಕುಣಿಯಲಾಗದವಳು ನೆಲ ಡೊಂಕು ಎನ್ನುವಂತಹ ಉತ್ತರವಾಗಿದೆ. ಕಾಂಗ್ರೆಸ್ ತನ್ನ ಅಸ್ತಿತ್ವ ಸ್ವಂತಿಕೆ ಎಲ್ಲವನ್ನೂ ಕಳೆದುಕೊಂಡಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರ.