ಚಿಕ್ಕಮಗಳೂರು: “ಕಾಯಕವೇ ಕೈಲಾಸ” ಎಂಬ ತತ್ವದಂತೆ ಪ್ರತಿಯೊಂದು ವೃತ್ತಿಗೂ ಗೌರವ ನೀಡಬೇಕು. ನಗರವನ್ನು ಸ್ವಚ್ಛವಾಗಿಡಲು ನಿರಂತರವಾಗಿ ಶ್ರಮಿಸುವ ಪೌರಕಾರ್ಮಿಕರನ್ನು ಗೌರವದಿಂದ ಕಾಣುವುದು ಸಮಾಜದ ಜವಾಬ್ದಾರಿ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಹೇಳಿದರು.
ಚಿಕ್ಕಮಗಳೂರು ನಗರಸಭೆ ಆವರಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರ ಸೇವೆಯನ್ನು ಶ್ಲಾಘಿಸಿದರು.
ಪೌರಕಾರ್ಮಿಕರ ಪರಿಶ್ರಮದಿಂದಲೇ ನಗರ ಸ್ವಚ್ಛವಾಗಿರಲು ಸಾಧ್ಯ. ಅವರ ಯೋಗಕ್ಷೇಮದ ಜವಾಬ್ದಾರಿ ಸರ್ಕಾರ ಹಾಗೂ ಸಮಾಜದ ಮೇಲಿದೆ. ಒಂದು ಕಾಲದಲ್ಲಿ ಹೊರಗಿನಿಂದ ಬರುವವರು ಚಿಕ್ಕಮಗಳೂರನ್ನು ಸ್ವಚ್ಛ ನಗರ ಎಂದು ಗುರುತಿಸುತ್ತಿದ್ದರು. ಆದರೆ ಇತ್ತೀಚೆಗೆ 60 ಅಡಿ ರಸ್ತೆ, ಬೈಪಾಸ್ ರಸ್ತೆ ಹಾಗೂ ಉಪ್ಪಳ್ಳಿ ರಸ್ತೆಯ ಕೆಲವು ಭಾಗಗಳಲ್ಲಿ ಕಸದ ರಾಶಿ ಕಾಣಿಸಿಕೊಳ್ಳುತ್ತಿರುವುದು ಸ್ವಚ್ಛತಾ ವ್ಯವಸ್ಥೆಯಲ್ಲಿ ಎಲ್ಲೋ ಕೊರತೆ ಉಂಟಾಗಿರುವುದನ್ನು ತೋರಿಸುತ್ತದೆ ಎಂದು ಹೇಳಿದರು.

ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಹಲವು ವರ್ಷಗಳ ಪರಿಶ್ರಮದಿಂದ ರೂಪಿಸಲಾಗಿದೆ. ಸ್ವಚ್ಛ ಟ್ರಸ್ಟ್‌ನಿಂದ ಆರಂಭವಾಗಿ ಧರ್ಮಸ್ಥಳದ ಸಹಕಾರದೊಂದಿಗೆ ವ್ಯವಸ್ಥೆ ವಿಸ್ತರಿಸಲಾಗಿದೆ. ಈ ವ್ಯವಸ್ಥೆ ಕುಸಿಯದಂತೆ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವುದು ಎಲ್ಲರ ಜವಾಬ್ದಾರಿ ಎಂದರು.
ಪೌರಕಾರ್ಮಿಕರಿಗೆ ಮನೆ, ನಿವೇಶನ ಕಲ್ಪಿಸಲು ಒತ್ತು
ಪೌರಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿರುವ 76 ಮನೆಗಳ ಪೈಕಿ 54 ಮನೆಗಳು ಪೂರ್ಣಗೊಂಡಿದ್ದು, ಇನ್ನೂ 22 ಮನೆಗಳ ಕಾಮಗಾರಿ ಬಾಕಿಯಿದೆ. ಬಾಕಿ ಉಳಿದಿರುವ ಮನೆಗಳನ್ನು ಶೀಘ್ರ ಪೂರ್ಣಗೊಳಿಸುವುದರ ಜೊತೆಗೆ ಮನೆ ಇಲ್ಲದ ಇತರ ಪೌರಕಾರ್ಮಿಕರಿಗೂ ನಿವೇಶನ ಹಾಗೂ ಮನೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನೆ ನಿರ್ಮಾಣಕ್ಕೆ ₹7 ಲಕ್ಷ ಸಬ್ಸಿಡಿ ನೀಡಲಾಗುತ್ತಿದ್ದು, ಅಗತ್ಯವಿರುವವರಿಗೆ ನಿವೇಶನ ಒದಗಿಸಲು ಸರ್ಕಾರಿ ಅಥವಾ ಸಿಎ ನಿವೇಶನಗಳನ್ನು ಗುರುತಿಸಿ ಹಂತ ಹಂತವಾಗಿ ಎಲ್ಲ ಪೌರಕಾರ್ಮಿಕರಿಗೂ ನಿವೇಶನ ಕಲ್ಪಿಸುವ ಪ್ರಯತ್ನ ನಡೆಯಬೇಕು ಎಂದರು.
ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ವಾಟರ್‌ಮ್ಯಾನ್‌ಗಳನ್ನು ನೇರ ಪಾವತಿ ವ್ಯವಸ್ಥೆಗೆ ಒಳಪಡಿಸಿ, ಪೌರಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಅವರಿಗೂ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ನೀತಿಯಲ್ಲಿ ಅಗತ್ಯ ಬದಲಾವಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 150ಕ್ಕೂ ಹೆಚ್ಚು ಗುತ್ತಿಗೆ ನೌಕರರಿಗೂ ನ್ಯಾಯಯುತ ಸೌಲಭ್ಯ ದೊರೆಯಬೇಕು. ಹಲವು ವರ್ಷಗಳ ಸೇವೆ ಸಲ್ಲಿಸಿದ ಬಳಿಕ ನಿವೃತ್ತಿ ವಯಸ್ಸಿಗೆ ಬಂದರೂ ಸೌಲಭ್ಯಗಳಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಮುಖ್ಯಮಂತ್ರಿಗಳು ಪೌರಕಾರ್ಮಿಕರ ವಿಶೇಷ ಭತ್ಯೆಯನ್ನು ₹7 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸುವುದಾಗಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿದ ಡಾ. ರವಿ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ನಗರಸಭೆಯ ಅನುದಾನದಿಂದ ಕನಿಷ್ಠ ₹1,500 ನೆರವು ನೀಡುವ ಕುರಿತು ನಗರಸಭೆ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಪೌರಕಾರ್ಮಿಕರ ಬೆನ್ನೆಲುಬಾಗಿ ನಿಂತು ಅವರ ಕಷ್ಟ–ಸುಖಗಳಲ್ಲಿ ಭಾಗಿಯಾಗುವುದು ಜನಪ್ರತಿನಿಧಿಗಳ ಕರ್ತವ್ಯ. ನಗರ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುವ ಕಾರ್ಮಿಕರಿಗೆ ಸಮಾಜ ಗೌರವ ನೀಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಗಾಯತ್ರಿ ಶಾಂತೇಗೌಡ, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿ ನಾಯ್ಕ್, ಪೌರಾಯುಕ್ತ ಬಸವರಾಜ್ ಸೇರಿದಂತೆ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.





































































