ಬೆಂಗಳೂರು: ಗಣಿಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಖನಿಜ ನೀತಿ ಅನುಗುಣವಾಗಿ ರಾಜ್ಯ ಸರ್ಕಾರವು 2021-26ನೇ ಸಾಲಿನ ರಾಜ್ಯ ಖನಿಜ ನೀತಿಯನ್ನು ಜಾರಿ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಅವರು, ನಮ್ಮ ಸರ್ಕಾರವು 2008ರಲ್ಲಿಯೇ ಖನಿಜ ನೀತಿಯನ್ನು ಜಾರಿಗೆ ತಂದಿತ್ತು. ಇದೀಗ ಈ ಇಲಾಖೆಯಲ್ಲಿ ಇನ್ನಷ್ಟು ಸುಧಾರಣೆ ತರಬೇಕೆಂಬುದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದರು.
ರಾಷ್ಟ್ರೀಯ ಖನಿಜ ಕಾರ್ಯ ನೀತಿಗೆ ಸಮನಾಗಿ 2021-26ನೇ ಸಾಲಿನ ರಾಜ್ಯ ಖನಿಜ ನೀತಿಯನ್ನು ರೂಪಿಸಲಿದ್ದೇವೆ ಎಂದು ಬಿಎಸ್ವೈ ಪ್ರಕಟಿಸಿದರು.
ಗಣಿ, ಕಲ್ಲು ಗಣಿ ಗುತ್ತಿಗೆ ಮತ್ತು ಕ್ರಷರ್ ಲೈಸೆನ್ಸ್ ಕೋರಿ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವ ಸದುದ್ದೇಶದಿಂದ ಇದೇ ಮೊದಲ ಬಾರಿಗೆ ಏಕಗವಾಕ್ಷಿ ಪದ್ದತಿಯನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಏಕಗವಾಕ್ಷಿ ಯೋಜನೆಯಡಿ ಗಣಿ ಅದಾಲತ್ಗಳನ್ನು ಪ್ರಾರಂಭಿಸಲಾಗುವುದು. ಇದರಿಂದ ಸಾರ್ವಜನಿಕರು ನಿಗದಿತ ಸಮಯದೊಳಗೆ ತಮ್ಮ ಅರ್ಜಿಗಳನ್ನು ಇತ್ಯರ್ಥಪಡಿಸಿಕೊಂಡು ವ್ಯಾಪಾರ ಉದ್ಯಮ ಆರಂಭಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗಣಿ ಅದಾಲತ್ಗಳನ್ನು ಕಂದಾಯ ವಿಭಾಗಗಳಲ್ಲಿ ಪ್ರಾರಂಭ ಮಾಡುವುದರಿಂದ ಉದ್ಯಮಿಗಳು ಇಲಾಖೆಯಿಂದ ಇಲಾಖೆಗೆ ಅಲೆಯುವುದು ತಪ್ಪಿದಂತಾಗುತ್ತದೆ. ಈಗಾಗಲೇ ಇಲಾಖೆಯು ಕಾರ್ಯೋನ್ಮುಖವಾಗಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಸಿಎಂ ಹೇಳಿದರು.