ಬೆಂಗಳೂರು: ಕೋವಿಡ್‌ನಿಂದ ಉಂಟಾದ ಆರ್ಥಿಕ ಸವಾಲುಗಳ ನಡುವೆಯೂ ಜನರಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದ ಹಾಗೂ ಕೃಷಿ, ಶಿಕ್ಷಣ, ಹೂಡಿಕೆ, ಉದ್ಯೋಗ ಸೃಷ್ಟಿಗೆ ಪೂರಕವಾದ ಸಮಗ್ರ ದೃಷ್ಟಿಕೋನದ ಸಮತೋಲಿತ 2021ನೇ ಸಾಲಿನ ಮುಂಗಡಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದಾರೆಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೋವಿಡ್ ಸಂಕಷ್ಟವು ಆರ್ಥಿಕ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು. ಜನತೆಗೆ ತೀವ್ರ ಸಮಸ್ಯೆಗಳನ್ನು ಸೃಷ್ಟಿ ಮಾಡಿತು. ಆರ್ಥಿಕ-ಉದ್ಯೋಗ ನಷ್ಟದಿಂದ ಇಡೀ ರಾಜ್ಯ ಕಂಗಾಲಾಗಿತ್ತು. ಇಂಥ ಸಂಕಷ್ಟ ಕಾಲದಲ್ಲಿ ಸಂಜೀವಿನಿಯಂತೆ ಬಜೆಟ್ ಮೂಡಿಬಂದಿದೆ. ಹೊಸ ಭರವಸೆಯನ್ನು ತಂದಿದೆ ಎಂದಿದ್ದಾರೆ..
ಸಾಮಾಜಿಕ ನ್ಯಾಯವನ್ನು ಈ ಬಜೆಟ್ ಎತ್ತಿ ಹಿಡಿದಿದ್ದು, 30 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ 52,529 ಕೋಟಿ ರೂ.ಗಳ ಅನುದಾನವನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ ಎಂದ ಅವರು; ಕ್ವಾಂಟಂ ತಂತ್ರಜ್ಞಾನ ಅಭಿವೃದ್ಧಿಗೆ 10 ಕೋಟಿ ರೂ. ಮೀಸಲಿಟ್ಟು ʼಸಂಶೋಧನಾ ಪಾರ್ಕ್ʼ ಸ್ಥಾಪನೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಅಶ್ವತ್ಥನಾರಾಯಣ ಬಣ್ಣಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಇದೇ ವರ್ಷ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ʼಶೈಕ್ಷಣಿಕ ನಾಯಕತ್ವʼ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಮೂಲಕ ರಾಜ್ಯದ ವಿವಿಗಳಲ್ಲಿ ನಾವಿನ್ಯತೆ, ಸಂಸೋಧನೆ, ಬಹಶಿಸ್ತಿನ ಅಧ್ಯಯನ, ನಾಯಕತ್ವ ನಿರ್ಮಾಣಕ್ಕೆ ಒತ್ತು ನೀಡಲಾಗದೆ ಎಂದರು ಡಿಸಿಎಂ.