ರಾಜ್ಯದಲ್ಲಿ ಒಟ್ಟು ಸಾವಿರದ ಇನ್ನೂರೈವತ್ತು ಮಂದಿಗೆ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದೆ.ಈ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ಔಷಧ ಸಿಗುತ್ತಿಲ್ಲ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಸಾಧ್ಯವಾದಷ್ಟು ಔ಼ಷಧ ತರಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿ ದಿನ ಎಂಟರಿಂದ ಹತ್ತು ಸಾವಿರ ವಯಲ್ಸ್ ಬೇಕಾಗಿದೆ ಎಂದು ಮನವಿ ಮಾಡಲಾಗಿದೆ. ಸದ್ಯ ರಾಜ್ಯಾದ್ಯಂತ ಆಕ್ಸಿಜನ್ ಬಳಕೆ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಬ್ಲಾಕ್‌ಫಂಗಸ್ ಸೋಂಕಿಗೆ ಕಾರಣಗಳನ್ನು ಪತ್ತೆ ಹಚ್ಚಲು ತಜ್ಞರ ಸಮಿತಿ ರಚಿಸಲಾಗಿದೆ. ಈಗಾಗಲೇ ಅವರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಇನ್ನೂ ಅಂತಿಮ ವರದಿ ಬರಬೇಕಿದೆ. ಸಕ್ಕರೆ ಕಾಯಿಲೆ ಇದ್ದು ನಿಯಂತ್ರಣದಲ್ಲಿ ಇಲ್ಲದವರಿಗೆ ಕೋವಿಡ್ ರಿಂದ ಗುಣಮಖರಾದ ಬಳಿಕ, ಅತಿ ಹೆಚ್ಚು ಆಕ್ಸಿಜನ್ ಬಳಕೆ ಮಾಡಿದ್ದವರಿಗೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸ್ಟಿರಾಯ್ಡ್ ಬಳಕೆ ಮಾಡಿದ್ದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಅಂತಿಮ ವರದಿ ಇನ್ನೂ ಬರಬೇಕಿದೆ ಎಂದು ಸ್ಪಷ್ಟಪಡಿಸಿದರು.
ವೈದ್ಯರ ನಡಿಗೆ ಗ್ರಾಮಗಳ ಕಡೆಗೆ ನಿಜಕ್ಕೂ ಅತ್ಯುತ್ತಮ ಕಾರ್ಯಕ್ರಮ. ಜನರ ಬಳಿಗೇ ತೆರಳಿ ಸರ್ಕಾರದ ಸವಲತ್ತುಗಳನ್ನುಒದಗಿಸುವುದು ಎಂದಿಗೂ ಉತ್ತಮ ಕೆಲಸ. ಇಂಥ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ವೈದ್ಯರೇ ಗ್ರಾಮಗಳಿಗೆ ತೆರಳಿ ತಪಾಸಣೆ ಮಾಡುವುದು ನಿಜಕ್ಕೂ ಉತ್ತಮ ಕಾರ್ಯಕ್ರಮವಾಗಿದೆ ಎಂದೂ ಸಚಿವ ಸುಧಾಕರ್ ಹೇಳಿದರು.