ಬೆಂಗಳೂರು: ರಾಜ್ಯ ರಾಜಕಾರಣವನ್ನು ಬಿಟ್ಟೂ ಬಿಡದಂತೆ ಕಾಡುತ್ತಿರುವ ‘ಬಿಟ್’ ಜ್ವರ ಅವೆಷ್ಟು ಮಂದಿ ನಾಯಕರ ರಾಜಕೀಯ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತೋ ಗೊತ್ತಿಲ್ಲ. ಆದರೆ ವಿಶ್ವಮಾನ್ಯ ನಾಯಕನೆಂದು ಗುರುತಿಸಿಕೊಳ್ಳುತ್ತಿರುವ ಮೋದಿ ಅವರೇ ಇದೀಗ ಮುಜುಗರ ಪಡುವಂತಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ದಾರಿಯನ್ನು ರಾಜ್ಯದ ಮುಖಂಡರು ಕಲ್ಲು ಮುಳ್ಳಿನ ಹಾದಿಯನ್ನಾಗಿಸಿದ್ದಾರೆ ಎಂಬುದು ಕೇಸರಿ ಕಾರ್ಯಕರ್ತರ ಬೇಸರ.
ಇದೀಗ ‘ಬಿಟ್ ಕಾಯಿನ್’ ಅಕ್ರಮದಿಂದಾಗಿ ಭಾರತವು ಜಾಗತಿಕ ರಾಷ್ಟ್ರಗಳ ನಡುವೆ ಅನುಮಾನಗಳ ಕೇಂದ್ರಬಿಂದುವಾಗಿದೆ. ಅದಕ್ಕೆ ಹಾದಿ ಮಾಡಿಕೊಟ್ಟಿರುವುದು ಕರ್ನಾಟಕ ಬಿಜೆಪಿ ಸರ್ಕಾರದ ಪ್ರಮುಖರು ಎಂಬ ಬೇಸರ ಮೋದಿ ಆಪ್ತರದ್ದು ಹಾಗೂ ಬೆಂಬಲಿಗರದ್ದು.
ಈ ನಡುವೆ, ರಾಜೀನಾಮೆ ಸಾಧ್ಯತೆಯ ಬಗ್ಗೆ ಮಂತ್ರ ಪಠಿಸುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ರಾಜಕಾರಣದಲ್ಲಿ ಕುತೂಹಲದ ಕೇಂದ್ರಬಿಂದುವಗಿದ್ದಾರೆ. ಬೊಮ್ಮಾಯಿ ಅವರ ಕಾರ್ಯವೈಖರಿಯಿಂದಾಗಿಯೇ ಕಾಂಗ್ರೆಸ್ ನಾಯಕರು ಮೋದಿ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೇ ಕೆಂಗಣ್ಣು ಬೀರಿದ್ದಾರೆ.
‘ಬೊಮ್ಮಾಯಿ ಲೋಪ’; ಇವರಿಗೆ ಮೋದಿ ಮೇಲೆ ಕೋಪ
ಈ ನಡುವೆ, ಎಐಸಿಸಿ ನಾಯಕ ರಣದೀಪ್ ಸುರ್ಜಿವಾಲ ಅವರು ಮಾಡಿರುವ ಆರೋಪಗಳನ್ನು ಅರಗಿಸಿಕೊಳ್ಳುವುದೇ ಬಿಜೆಪಿ ಪಾಲಿಗೆ ಸವಾಲೆಂಂತಾಗಿದೆ. ಬಸವರಾಜ್ ಬೊಮ್ಮಾಯಿ ಅವರನ್ನಷ್ಟೇ ಅಲ್ಲ, ಪ್ರಧಾನಿ ಮೋದಿ ಹೆಸರನ್ನೂ ಕೈ ನಾಯಕರು ಪ್ರಸ್ತಾಪಿಸಿ ಗೇಲಿ ಮಾಡಿದ್ದಾರೆ. ದೇಶ-ವಿದೇಶಗಳ ಗಮನಸೆಳೆಯುವ ಉದ್ದೇಶದಿಂದ ಎಐಸಿಸಿ ನಾಯಕರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕುತೂಹಲಕಾರಿ ಬೆಳವಣಿಗೆಗೆ ಮುನ್ನುಡಿ ಬರೆದಿದ್ದಾರೆ.
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಚಿಂತಾಕ್ರಾಂತರಾಗಿದ್ದರೆ, ಇತ್ತ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಆಪ್ತ ಸಚಿವ ಸುಧಾಕರ್ ಅವರು ಶನಿವಾರ ರಾತ್ರಿ ಕರೆದ ತರಾತುರಿಯ ಸುದ್ದಿಗೋಷ್ಟಿ ಇಡೀ ಬಿಜೆಪಿ ಪಕ್ಷವನ್ನೇ ನಗೆಪಾಟಲಿಗೀಡಾಗುವಂತೆ ಮಾಡಿದೆ ಎಂಬುದು ಕಮಲ ನಾಯಕರ ಅಳಲು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಚರ್ಚೆ ಎದ್ದಿದ್ದು, ಇದೇ ವಿಚಾರ ಕಮಲ ಪಾಳಯದಲ್ಲೂ ಪ್ರತಿಧ್ವನಿಸಿದೆ.
ಖರ್ಗೆ ‘ಬಿಟ್’ ಅಸ್ತ್ರ ಇದು..
ಇದೇ ವಿಚಾರವನ್ನು ಮುಂದಿಟ್ಟು ಕಾಂಗ್ರೆಸ್ ಕೂಡಾ ಬಿಜೆಪಿ ಸರ್ಕಾರವನ್ನು ಗೇಲಿ ಮಾಡಿದೆ. ಈ ಪೈಕಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಮಾಡಿರುವ ಟ್ವೀಟ್ ಗಮನಸೆಳೆದಿದೆ.
‘HM ಅಂದರೆ ಹೋಮ್ ಮಿನಿಸ್ಟರ್ ಅನ್ನಬೇಕೋ, ಹೆಲ್ತ್ ಮಿನಿಸ್ಟರ್ ಅನ್ನಬೇಕೋ? ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಬಿಟ್ ಕಾಯಿನ್ ಹಗರಣದ ಬಗ್ಗೆ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿರುವುದೇಕೆ? ಎಂದು ಜೂನಿಯರ್ ಖರ್ಗೆ ಪ್ರಶ್ನಿಸಿದ್ದಾರೆ. ನಾಳೆ ಗೃಹ ಸಚಿವರು ಬಂದು ರಾಜ್ಯದ ಕರೋನಾ ಲಸಿಕೆಯ ಮಾಹಿತಿ ನೀಡ್ತಾರಾ? ಎಂದು ಅವರು ಗೇಲಿ ಮಾಡಿದ್ದಾರೆ.
HM ಅಂದರೆ ಹೋಮ್ ಮಿನಿಸ್ಟರ್ ಅನ್ನಬೇಕೋ, ಹೆಲ್ತ್ ಮಿನಿಸ್ಟರ್ ಅನ್ನಬೇಕೋ?
ಗೃಹ ಸಚಿವಾಲಯಕ್ಕೆ ಸಂಬಂಧಿಸಿದ ಬಿಟ್ ಕಾಯಿನ್ ಹಗರಣದ ಬಗ್ಗೆ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿರುವುದೇಕೆ?
ನಾಳೆ ಗೃಹ ಸಚಿವರು ಬಂದು ರಾಜ್ಯದ ಕರೋನಾ ಲಸಿಕೆಯ ಮಾಹಿತಿ ನೀಡ್ತಾರಾ?
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 13, 2021