ದೆಹಲಿ: ರಾಜ್ಯ ಬಿಜೆಪಿಯಲ್ಲೀಗ ನಾಯಕತ್ವ ಬದಲಾವಣೆ ಸಂಬಂಧದ ಸುದ್ದಿಯಿಂದ ಉಂಟಾಗಿದ್ದ ತಳಮಳ ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ರಾಜ್ಯ ಭೇಟಿ ಸಂದರ್ಭದಲ್ಲಿ ನಡೆಸಿದ ಕಸರತ್ತಿನ ನಂತರ ಬಿಜೆಪಿಯಲ್ಲಿನ ಬೆಳವಣಿಗೆಗಳು ಬಹಿರಂಗವಾಗಿ ಗೋಚರಿಸುತ್ತಿಲ್ಲ. ಅರುಣ್ ಸಿಂಗ್ ಅವರು ಅತೃಪ್ತರಿಗೆ ಕೊಟ್ಟ ವಾರ್ನಿಂಗ್ ನಂತರ ಬಿಎಸ್‌ವೈ ನಿರಾಳರಾಗಿದ್ದಾರೆ. ಆದರೆ ಒಳಗೊಳಗೆ ಬಂಡಾಯದ ಕಿಡಿ ಹೊಗೆಯಾಡುತ್ತಿದೆ.
ಈ ನಡುವೆ ಅರುಣ್ ಸಿಂಗ್ ಅವರು ಹೊತ್ತೊಯ್ದ ವರದಿಯ ನಂತರ ದಿಲ್ಲಿ ವರಿಷ್ಠರು ಕೂಡಾ ಸದ್ಯ ಮೂರು ತಿಂಗಳ ಕಾಲ ನಾಯಕತ್ವ ಬದಲಾವಣೆ ಮಾಡಬಾರದೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಬಿಎಸ್‌ವೈ ಅವರನ್ನು ಕರೆಸಿಕೊಂಡು ಕಿವಿಮಾತು ಹೇಳಲು ನಿರ್ಧರಿಸಿದ್ದಾರೆ.
ಇನ್ನೊಂದೆಡೆ, ರಾಜ್ಯಕ್ಕಾಮಿಸಿದ್ದ ಅರುಣ್ ಸಿಂಗ್ ಅವರು ಯಡಿಯೂರಪ್ಪ ಅವರ ಪರವಾಗಿ ನಿಂತು ಅತೃಪ್ತರತ್ತ ಚಾಟಿ ಬೀಸಿದ್ದರು. ಬಿಎಸ್‌ವೈ ಪರವಾಗಿಯೇ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ. ಆದರೆ ಅದಕ್ಕೂ ಮುನ್ನವೇ ಮೋದಿ ಅಂಗಳಕ್ಕೆ ಅತೃಪ್ತರ ತಂಡವೊಂದು ಪತ್ರ ರವಾನಿಸಿ ಮತ್ತಷ್ಟು ಕೋಲಾಹಲದ ಬೆಳವಣಿಗೆಗೆ ಮುನ್ನುಡಿ ಬರೆದಿದೆ.
ಅರುಣ್ ಸಿಂಗ್ ಅವರು ರಾಜ್ಯ ಭೇಟಿ ವೇಳೆ ಬಿಎಸ್‌ವೈ ಅವರಿಗೆ ವರದಾನವಾಗುವ ರೀತಿಯಲ್ಲೇ ನಡೆದುಕೊಂಡಿದ್ದಾರೆ. ಅತೃಪ್ತಿ ಬಗ್ಗೆ ಶಾಸಕರಿಂದ ಮಾಹಿತಿ ಪಡೆಯಲು ಆಸಕ್ತಿ ತೋರಿಲ್ಲ ಎಂಬ ಸಂಗತಿಯನ್ನು ಮೋದಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಹಲವು ಶಾಸಕರು ಹಾಗೂ ಪಕ್ಷದ ಮುಖಂಡರು ಅರುಣ್ ಸಿಂಗ್ ಭೇಟಿಗೆ ಅವಕಾಶ ಕೋರಿದರೂ ಅವರು ಸ್ಪಂಧಿಸದಿರುವುದರಿಂದ 40ಕ್ಕೂ ಹೆಚ್ಚು ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಅಚ್ಚರಿಯ ಬೆಳವಣಿಗೆ ಎಂದರೆ, ಅರುಣ್ ಸಿಂಗ್ ಅವರು ದೆಹಲಿ ತಲುಪುವ ಮುನ್ನವೇ ಅತೃಪ್ತರ ದೂರಿನ ಪ್ರತಿ ಮೋದಿ ಕೈಗೆ ತಲುಪಿದೆಯಂತೆ.
ದೂರಿನಲ್ಲಿ ಏನಿದೆ..?
40ಕ್ಕೂ ಹೆಚ್ಚು ಮಂದಿ ಶಾಸಕರು, ವಿಧಾನಸಭಾ ಸದಸ್ಯರು, ಪಕ್ಷದ ಪ್ರಮುಖ ಮುಖಂಡರು ಸಹಿ ಮಾಡಿದ್ದಾರೆನ್ನಲಾದ ಐದು ಪುಟಗಳ ಪತ್ರದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ದ ಆರೋಪಗಳ ಮಾಹಿತಿ ಉಲ್ಲೇಖಿಸಿದ್ದಾರೆ.
ಏಳು ಪ್ರಮುಖ ಲೋಪ ಹಾಗೂ ಅಕ್ರಮಗಳತ್ತ ಬೊಟ್ಟು ಮಾಡಿ ಆರೋಪ ಪಟ್ಟಿಯನ್ನು ಸಿದ್ದಪಡಿಸಿ ಈ ಪತ್ರವನ್ನು ಅತೃಪ್ತರು ಪ್ರಧಾನಿಗೆ ರವಾನಿಸಿದ್ದಾರೆ.
ಮೊದಲನೇಯದಾಗಿ, ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಅಧಿಕಾರ ದುರುಪಯೋಗಪಡಿಸುತ್ತಿದ್ದು ರಾಜ್ಯದ ಆದಾಯ ಸೋರಿಕೆಗೆ ಕಾರಣರಾಗಿದ್ದಾರೆ. ಅಧಿಕಾರಿಗಳ ಸಲಹೆಗಳನ್ನೂ ಮೀರಿ ಏಕಪಕ್ಷೀಯವಾಗಿ, ಸ್ವಹಿತಾಸಕ್ತಿಗನುಗುಣವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಇಬ್ಬರೂ ನಾಯಕರ ಮೇಲೂ ಎಸಿಬಿ, ಲೋಕಾಯುಕ್ತ, ಹೈಕೋರ್ಟ್, ಸುಪ್ರೀಂ ಕೋರ್ಟ್, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳ ಮುಂದೆ ಭ್ರಷ್ಟಾಚಾರ ಹಾಗೂ ವಂಚನೆಯ ಪ್ರಕರಣಗಳಿವೆ. ಆದರೂ ಇವರು ಹಣಕಾಸು ಇಲಾಖೆಯ ಅನುಮೋದನೆ ಪಡೆಯದೆ ಸಾವಿರಾರು ಕೋಟಿ ರೂಪಾಯಿ ಮೊತ್ತದ ಟೆಂಡರ್ ಕರೆದು ಅಕ್ರಮ ಎಸಗಿದ್ದಾರೆ ಎಂದು ಈ ಪತ್ರದಲ್ಲಿ ಆರೋಪಿಸಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತದ ಮಂತ್ರ ಪಠಿಸುತ್ತಿರುವ ಪ್ರಧಾನಿ ಮೋದಿಯವರೇ ಈ ಎಲ್ಲಾ ಸಂಗತಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿ ಎಂಬಂತಿದೆ ಈ ಪತ್ರ.
ಇವರ ಸರ್ವಾಧಿಕಾರಿ ಧೋರಣೆಯಿಂದಾಗಿ ಬಿಜೆಪಿ ಕಾರ್ಯಕರ್ತರು ನೊಂದಿದ್ದಾರೆ ಎಂದು ಹಲವಾರು ಘಟನಾವಳಿಗಳನ್ನು ಉಲ್ಲೇಖಿಸಿರುವ ಈ ಶಾಸಕರ ಗುಂಪು, ಜಲಸಂಪನ್ಮೂಲ ಇಲಾಖೆಯಲ್ಲಿನ ಹಗರಣಗಳ ಬಗ್ಗೆಯೂ ಗಮನಸೆಳೆದಿದ್ದಾರೆ. ಜಿಂದಾಲ್ ಜಮೀನು ಹಂಚಿಕೆ ವಿವಾದ ಹಾಗೂ ಅಕ್ರಮ ಟೆಂಡರ್‌ಗಳ ಮೂಲಕ ಕಿಕ್ ಬ್ಯಾಕ್ ಪಡೆದಿದ್ದು ಈ ಅರೊಪಗಳ ಬಗ್ಗೆ ಪರಿಶೀಲಿಸಿ ಪಕ್ಷಕ್ಕೆ ಹಾಗೂ ಜನರಿಗೆ ನ್ಯಾಯಕೊಡಿಸಿ ಎಂದು ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ಮುಕ್ತ ಆಡಳಿತದ ಮಂತ್ರ ಪಠಿಸುತ್ತಿರುವ ಮೋದಿಯವರೇ ಈ ಎಲ್ಲಾ ಸಂಗತಿಗಳನ್ನು ಪರಿಶೀಲಿಸಿ ತೀರ್ಮಾನ ಪ್ರಕಟಿಸಲಿ ಎಂಬಂತಿದೆ ಈ ಪತ್ರ.