ಬೆಂಗಳೂರು: ತಮ್ಮ ಸ್ವಂತ ಆಡಳಿತ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ರಾಜಸ್ತಾನದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ದೇಶದೆಲ್ಲೆಡೆ ಹೆಣ್ಣು ಮಕ್ಕಳ ಬಗ್ಗೆ ನಡೆದ ಸಣ್ಣ ಪ್ರಕರಣವನ್ನು ಧಾವಿಸಿ ರಾಜಕೀಯ ಲಾಭದ ಹುನ್ನಾರ ಮಾಡುವ ಪ್ರಿಯಾಂಕ ಗಾಂಧಿ ಅವರೇ ರಾಜಸ್ತಾನದಲ್ಲಿ ನಡೆದ ಇಷ್ಟು ಮಾನಭಂಗ ಮತ್ತು ದೌರ್ಜನ್ಯಕ್ಕೆ ನಿಮ್ಮ ಉತ್ತರವೇನು?. ಈ ಆಡಳಿತ ವೈಫಲ್ಯಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೀರಿ? ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತದ ರಾಜಸ್ತಾನದಲ್ಲಿ ಕಳೆದ ಹಲವು ದಿನಗಳಿಂದ ದಲಿತರು ಹಾಗೂ ಇತರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ, ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಎಲ್ಲೆಡೆ ನಡೆಯುತ್ತಿದೆ. ನಿನ್ನೆ ಆಳ್ವಾರ್ ಎಂಬಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಂತ ಅತ್ಯಾಚಾರ ನಿಜಕ್ಕೂ ದೌರ್ಭಾಗ್ಯವೇ ಸರಿ. ಕಾಂಗ್ರೆಸ್ ಆಡಳಿತದ ದಲಿತರಿಗೆ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿ ಕಾನೂನು ಸುವ್ಯವಸ್ಥೆ ತೀವ್ರ ಹದಗೆಟ್ಟಿದ್ದು ಆಡಳಿತ ನಡೆಸಲು ಅಸಮರ್ಥರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಪ್ರಿಯಾಂಕ ಗಾಂಧಿ ಅವರಿಗೆ ದೇಶದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಬಗ್ಗೆ ಇರುವ ಕಾಳಜಿ ಇದರಿಂದ ಅರ್ಥವಾಗುತ್ತದೆ. ಅವರ ಮತಬೇಟೆಯ ಕಾಳಜಿಯನ್ನು ದೇಶದ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಸಿಹಿ ಮಾತನಾಡಿ ಮಹಿಳೆಯರಿಗೆ ರಕ್ಷಣೆಯೇ ನೀಡದೆ ವ್ಯರ್ಥ ರಾಜಕಾರಣ ಮಾಡುತ್ತಿರುವ ಪ್ರಿಯಾಂಕ ಗಾಂಧಿ ಅವರ ಡೊಂಗಿತನ ಇದರಿಂದ ಬಹಿರಂಗವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣವನ್ನು ಶ್ರೀಮತಿ ಗೀತಾ ವಿವೇಕಾನಂದ ಅವರು ತೀವ್ರವಾಗಿ ಖಂಡಿಸಿದ್ದಾರೆ. ತಕ್ಷಣವೇ ರಾಜಸ್ತಾನ ಸರ್ಕಾರವನ್ನು ಮತ್ತು ಅಲ್ಲಿನ ಅಸಮರ್ಥ ಮುಖ್ಯಮಂತ್ರಿಯನ್ನು ವಜಾಗೊಳಿಸಿ ಅಲ್ಲಿನ ಹೆಣ್ಣು ಮಕ್ಕಳಿಗೆ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.