ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಪರ್ವ ಸನ್ನಿಹಿತ ಎಂದೇ ಹೇಳಲಾಗುತ್ತಿದೆ. ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆ, ಎದುರಾಳಿ ನಾಯಕರ ಬಗ್ಗೆ ಬಿಎಸ್‌ವೈ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಮಾನಗಳ ನಡುವೆ ಈ ತಿಂಗಳ 16 ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶಿಸಲಿದ್ದಾರೆ.
ಇನ್ನೊಂದೆಡೆ ನಾಯಕತ್ವ ಬದಲಾವಣೆ ಖಚಿತ ಎಂಬುದು ಬಿಜೆಪಿ ಕೇಂದ್ರೀಯ ಕಚೇರಿ ಮೂಲಗಳಿಂದ ಹಾಗೂ ಆರೆಸ್ಸೆಸ್ ನಾಯಕರ ಕಡೆಯಿಂದ ಹಂಚಿಕೆಯಾಗುತ್ತಿರುವ ಅಭಿಪ್ರಾಯ. ಈ ನಡುವೆ, ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದರೆ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಕುತೂಹಲಕಾರಿ ಪ್ರಶ್ನೆಯೂ ಉದ್ಭವವಾಗಿದೆ. ಬಿಜೆಪಿ ಪಾಳಯದಲ್ಲಿ ಹಲವರ ಹೆಸರುಗಳು ಕೇಳಿ ಬರುತ್ತಿವೆಯಾದರೂ ಆರೆಸ್ಸೆಸ್ ಕಾರ್ಯಕರ್ತರ ಅಪೇಕ್ಷೆಯೇ ವಿಭಿನ್ನ.
ಉದಯ ನ್ಯೂಸ್ ತಂಡ ಆರೆಸ್ಸೆಸ್ ಕಾರ್ಯಕರ್ತರ ಹಾಗೂ ಮುತ್ಸದ್ದಿ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿದ ಸಂದರ್ಭದಲ್ಲಿ ನಿರ್ದಿಷ್ಟ ಅಭಿಪ್ರಾಯ ವ್ಯಕ್ತವಾಗಿದೆ. ಮೂಲ ಕಾರ್ಯಕರ್ತರೇ ಸಿಎಂ ಸ್ಥಾನಕ್ಕೆ ಸೂಕ್ತ ಎಂಬ ಒಲವು ವ್ಯಕ್ತವಾಗಿದೆ.
ಬಿಎಸ್‌ವೈ ಕುಟುಂಬಕ್ಕೆ ವಿರೋಧ..
ಬಿಎಸ್‌ವೈ, ವಿಜಯೇಂದ್ರ ಇತ್ಯಾದಿ ಹೆಸರುಗಳ ಬಗ್ಗೆ ಸಂಘದ ಮುಖಂಡರಿಗೆ ಆಸಕ್ತಿ ಕಂಡುಬಂದಿಲ್ಲ. ಅವರ ಜೊತೆ ಗುರುತಿಸಿಕೊಂಡವರ ಬಗ್ಗೆಯೂ ಒಲವಿಲ್ಲ. ಯಾಕೆಂದರೆ ‘ಒಂದೊಮ್ಮೆ ಸಂಘದ ಬಗ್ಗೆ ಮುನಿಸಿಕೊಂಡು ದೂರ ಸಾಗಿ, ಕೆಜೆಪಿ ಮೂಲಕ ಸಂಘಟನೆಗೆ ಬಲವಾದ ಏಟು ನೀಡಿದವರ ಬಗ್ಗೆ ನಾಯಕರಿಗೆ ಒಲವೇಕೆ’ ಎಂಬುದು ಹಲವರ ಪ್ರಶ್ನೆ.
ಸಂಪ್ರದಾಯ ದೂರ ಸರಿಯದಿರಲಿ..!!
ಸಂಘ ಮತ್ತು ಸಂಘದ ವಿವಿಧ ಕ್ಷೇತ್ರಗಳು ರಚನೆಯಾಗಿರುವುದೇ ರಾಷ್ಟ್ರೀಯತೆಯ ರಕ್ಷಣೆಯ ಉದ್ದೇಶಕ್ಕಾಗಿ. ಸಂಘದ ರಾಜಕೀಯ ಸಂಘಟನೆಯಾಗಿರುವ ಬಿಜೆಪಿಯ ಮುಖಂಡರು ಸದ್ಯದ ವ್ಯವಸ್ಥೆಯ ನಡುವೆ ಜನಪ್ರತಿನಿಧಿಗಳಾಗಿ ಸಂಭಾವನೆ ಪಡೆಯುತ್ತಿರಬಹುದು. ಆಧಿಕಾರವನ್ನೂ ಹೊಂದಿರಬಹುದು. ಆದರೆ ಪಕ್ಷದ ಚೌಕಟ್ಟಿನಲ್ಲಿ ಆತ ಸಂಘಟನೆಗೆ ಸೀಮಿತನಾಗಿರುವ ಕಾರ್ಯಕರ್ತನೇ. ಹಾಗಾಗಿ ಎಬಿವಿಪಿ, ಸೇವಿಕಾ ಸಮಿತಿ, ಬಿಎಂಎಸ್ ಸಹಿತ ಸಂಘದ ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಅಭ್ಯಾಸ ವರ್ಗ ನಡೆಸಿ, ಅವರು ಸೈದ್ಧಾಂತಿಕವಾಗಿ ಪರಿಪೂರ್ಣ ಕಾರ್ಯಕರ್ತನೆನಿಸಿದ ನಂತರವೇ ಸೂಕ್ತ ಜವಾಬ್ಧಾರಿ ವಹಿಸಲಾಗುತ್ತದೆ. ಆ ಸಂಪ್ರದಾಯದಂತೆಯೇ ಬಿಜೆಪಿಯಲ್ಲೂ ಆಗಾಗ್ಗೆ ಆಭ್ಯಾಸವರ್ಗದಂತಹಾ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಅಥವಾ ಐಟಿಸಿ, ಒಟಿಸಿಗಳಲ್ಲಿ ಶಿಕ್ಷಣ ಪಡೆಯುವಂತೆ ಸಂಘಟನೆಯ ಹಿರಿಯರು ಸಲಹೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಕ್ರಿಯೆ ನಿಂತಿದೆ. ಆ ಪರಿಣಾಮವಾಗಿಯೇ ಇದೀಗ ಪಕ್ಷಾಂತರಗೊಂಡು ಬಂದವರು ನೇರವಾಗಿ ಸಚಿವರಾಗುತ್ತಿದ್ದಾರೆ ಎಂಬುದು ಅನೇಕ ಸ್ವಯಂಸೇವಕರ ಅಸಮಾಧಾನದ ಮಾತುಗಳು. ‘ಇನ್ನು ಮುಂದೆ ಮೂಲ ಕಾರ್ಯಕರ್ತರನ್ನು ಹಾಗೂ ಒಟಿಸಿ ಮೇಲ್ಪಟ್ಟ ಶಿಕ್ಷಿತರನ್ನಷ್ಟೇ ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಬೇಕಿದೆ’ ಎಂಬುದು ಹಲವರ ಅಭಿಪ್ರಾಯ.
ಅಂತಹಾ ಅರ್ಹರು ಯಾರಿದ್ದಾರೆ..?
ಈ ನಡುವೆ ಅಂತಹಾ ಅರ್ಹರು ಯಾರಿದ್ದಾರೆ? ಎಂದು ಹುಡುಕುತ್ತಾ ಸಾಗಿದಾಗ ‘ಹಲವರನ್ನು ದೂರವಿಡಲೇಬೇಕಿದೆ’ ಎಂಬ ಅಭಿಪ್ರಾಯ ಸಿಕ್ಕಿದೆ.
- ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಸೋಮಣ್ಣ, ಅವರು ಜನತಾ ಪರಿವಾರದಿಂದ ಬಂದವರು.
- ಶ್ರೀರಾಮುಲು ಅವರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡು, ಬಿಎಸ್‌ಆರ್ ಪಕ್ಷ ಕಟ್ಟಿ ಕಹಿ ಅನುಭವವಾದ ಬಳಿಕ ಮಾತೃ ಪಕ್ಷಕ್ಕೆ ವಾಪಾಸಾದವರು.
- ಮುರುಗೇಶ್ ನಿರಾಣಿ ಕೂಡಾ ಅವಕಾಶವಾದಿ ರಾಜಕಾರಣಿ ಎಂಬುದು ಸಂಘದ ಕಾರ್ಯಕರ್ತರ ಆಬಿಪ್ರಾಯ. ನಿರಾಣಿಯವರು 2013ರಲ್ಲಿ ಯಡಿಯೂರಪ್ಪರ ಕೆಜೆಪಿ ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದ ಸುದ್ದಿಗಳ ಬಗ್ಗೆ ಆರೆಸ್ಸೆಸ್ ಕಾರ್ಯಕರ್ತರಿಗೆ ಇನ್ನೂ ಬೇಸರವಿದೆ.
- ಜನತಾ ಪರಿವಾರದಿಂದ ಬಂದಿರುವ ಬಸವರಾಜ್ ಬೊಮ್ಮಾಯಿ ಕೂಡಾ ಆವರೆಗೂ ಬಿಜೆಪಿಯನ್ನು ಧ್ವೇಷಿಸುತ್ತಿದ್ದರು.
- ಪ್ರಸ್ತುತ ಸಿಎಂ ರೇಸ್‌ನಲ್ಲಿರುವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ವರ್ಷಗಳ ಹಿಂದೆ ಬಿಜೆಪಿ ಹುರಿಯಾಳಾಗಿ ಕಣಕ್ಕಿಳಿಯುವ ಮುನ್ನ ಕಾಂಗ್ರೆಸ್ ಜೊತೆಗೆ ನಂಟು ಹೊಂದಿದ್ದರಲ್ಲವೇ ಎಂಬ ಅಸಮಾಧಾನ ಆರೆಸ್ಸೆಸ್ ಕಾರ್ಯಕರ್ತರಿಗಿದೆ.
ಇದೀಗ ಸಂಘದ ಹಿನ್ನೆಲೆಯುಳ್ಳ ಮನೆತನದವರಾದ ಅರವಿಂದ್ ಬೆಲ್ಲದ್ ಹೆಸರು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆಯಾದರೂ ಅವರ ಆಯ್ಕೆಗೆ ರಾಜಕೀಯ ಅನುಭವದ ಕೊರತೆ ಅಡ್ಡಿಯಾಗುವುದು ಸಹಜ.
ಮೂಲ ಬಿಜೆಪಿಗರತ್ತ ಚಿತ್ತ..
ಸಂಘದ ಹಿನ್ನೆಲೆಯುಳ್ಳ ಪ್ರಭಾವಿ ಬಿಜೆಪಿ ನಾಯಕರ ಪೈಕಿ ನಾಯಕತ್ವ ಗುಣದಿಂದಾಗಿ ಗುರುರುತಿಸಿಕೊಳ್ಳುತ್ತಿರುವವರು ಈಶ್ವರಪ್ಪ, ಆರ್.ಅಶೋಕ್, ಸಿ.ಟಿ.ರವಿ, ಅರವಿಂದ್ ಲಿಂಬಾವಳಿ, ಸುನಿಲ್ ಕುಮಾರ್, ಎಸ್.ಆರ್.ವಿಶ್ವನಾಥ್, ಡಿ.ವಿ.ಸದಾನಂದ ಗೌಡ, ಪ್ರಲ್ಹಾದ್ ಜೋಷಿ, ರಾಮದಾಸ್.
- ಡಿವಿಎಸ್ ಅದಾಗಲೇ ಸಿಎಂ ಆಗಿ ರಾಜೀನಾಮೆ ನೀಡಿದ್ದವರು.
- ನಳಿನ್ ಕುಮಾರ್ ಕಟೀಲ್ ಬಗ್ಗೆ ಸಂಘ ಮತ್ತು ಬಿಜೆಪಿ ನಾಯಕರಲ್ಲೇ ವಿರೋಧವಿದೆ.
- ರಾಮದಾಸ್ ಅವರು ಕಾನೂನಿನ ಸುಳಿಯಲ್ಲಿ ಸಿಲುಕಿದ್ದಾರೆ.
ಇನ್ನುಳಿದಂತೆ ಮುಂಚೂಣಿಯಲ್ಲಿರುವುದು ಪ್ರಲ್ಹಾದ್ ಜೋಷಿ, ಈಶ್ಬರಪ್ಪ, ಆರ್.ಅಶೋಕ್ ಹಾಗೂ ಸಿ.ಟಿ.ರವಿ ಹೆಸರುಗಳು.
- ಪ್ರಹ್ಲಾದ್ ಜೋಷಿ ಅವರು ಹಿರಿತನದಿಂದಾಗಿ ಗಮನಸೆಳೆಯುತ್ತಿದ್ದಾರೆ.
- ಸಿ.ಟಿ.ರವಿ ಅವರು ತಮಿಳುನಾಡು ಹಾಗೂ ಪಾಂಡಿಚೇರಿಯಲ್ಲಿ ನಿರೀಕ್ಷಿತ ಫಲಿತಾಂಶ ತಂದುಕೊಟ್ಟ ನಂತರ ಇದೀಗ ನ್ಯಾಷನಲ್ ಹೀರೋ. ಜೊತೆಗೆ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ಹಿಂದೂ ಕಟ್ಟಾಳು ಕೂಡಾ. ಇವರು ಮಠಾಧಿಪತಿಗಳಿಗೂ ಪ್ರೀಯರು. ಬಿಜೆಪಿಯಷ್ಟೇ ಅಲ್ಲ, ಆರೆಸ್ಸೆಸ್, ಭಜರಂಗದಳ, ಹಿಂಜಾವೇ, ವಿಹಿಂಪ ಕಾರ್ಯಕರ್ತರಿಗೂ ರೋಲ್ ಮಾಡೆಲ್.
- ಈಶ್ವರಪ್ಪ, ಆರ್.ಅಶೋಕ್, ಅರವಿಂದ ಲಿಂಬಾವಳಿ, ಸುನಿಲ್ ಕುಮಾರ್ ಕೂಡಾ ಸಂಘದ ಶಿಕ್ಷಣ ಪಡೆದಿರುವ ಸ್ವಯಂಸೇವಕರು. ಇವರದ್ದೂ ಸಂಘದ ಕಾರ್ಯಕರ್ತರ ಪಾಲಿಗೆ ಪ್ರಿಯವಾದ ಹೆಸರುಗಳು.
ಇವರೆಲ್ಲರನ್ನೂ ಸಂಘದ ಹಿರಿಯರಾದ ಮುಕುಂದ್ ಹಾಗೂ ಸಂತೋಷ್ ಅವರು ಅಳೆದು, ತೂಗಿ, ಅಂತಿಮವಾಗಿ ಯಾರನ್ನು ಸೂಚಿಸುತ್ತಾರೆ ಎಂಬುದೇ ಕಾರ್ಯಕರ್ತರಿಗಿರುವ ಕುತೂಹಲ.
ಒಂದು ವೇಳೆ ತರಾತುರಿಯಲ್ಲಿ ಸಿಎಂ ಆಯ್ಕೆ ನಡೆದರೆ ಮುಂದಿನ ದಿನಗಳಲ್ಲಿ ಕರುನಾಡಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕವೂ ಎದುರಾಗಬಹುದೆಂಬುದು ಸಂಘದ ಗರಡಿಯಲ್ಲಿ ಕೇಳಿಬರುತ್ತಿರುವ ಎಚ್ಚರಿಕೆಯ ಮಾತುಗಳು.