(ವರದಿ: ನವೀನ್)
ದೆಹಲಿ: ಬಿಜೆಪಿಯಲ್ಲಿ ಭಾರೀ ಬದಲಾವಣೆಯಾಗಲಿದೆ. ಹಲವು ರಾಜ್ಯಗಳ ಸಿಎಂಗಳ ಬದಲಾವಣೆ ನಂತರ ಉತ್ತರೆಪ್ರದೇಶದಲ್ಲೂ ಭರ್ಜರಿ ಬದಲಾವಣೆಗೆ ಅಮಿತ್ ಶಾ ಚಿಂತನೆ ನಡೆಸಿದ್ದಾರೆ ಅಷ್ಟೇ ಅಲ್ಲ, ಪಕ್ಷಕ್ಕೆ ಬೂಸ್ಟ್ ನೀಡಲು ಮುಂದಾಗಿರುವ ಹೈಕಮಾಂಡ್ ಕರ್ನಾಟಕದ ಬಗ್ಗೆಯೂ ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ಒಂದು ಮೂಲದ ಪ್ರಕಾರ ಸಿಎಂ ಬಸವರಾಜ್ ಬೊಮ್ಮಾಯಿ ಬದಲಾವಣೆ ಹಾಗೂ ಪಕ್ಷಕ್ಕೆ ರಾಜ್ಯಾಧ್ಯಕ್ಷರನ್ನು ನೇಮಿಸುವ ವಿಚಾರಕ್ಕೂ ಹಿಂಜರಿಯಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.
ಏನಿದು ದಿಢೀರ್ ಬೆಳವಣಿಗೆ..?
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪ್ರಾಂತೀಯ ಮಟ್ಟದ ಬೆಳವಣಿಗೆ ಹೈಕಮಾಂಡ್ ಪಾಲಿಗೆ ಸವಾಲೆಂಬಂತಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು ಅದಾಗಲೇ ಸಿಎಂ ಯೋಗಿ ವಿರುದ್ದ ಪಕ್ಷದ ಒಂದು ಗುಂಪು ಕತ್ತಿ ಮಸೆಯಲಾರಂಭಿಸಿದೆ. ವಲಸಿಗರ ಹಾವಳಿ ಇದಕ್ಕೆ ಕಾರಣ ಎಂದು ಮನಗಂಡಿರುವ ಅಮಿತ್ ಶಾ ಮುಂಬರುವ ಚುನಾವಣೆಯಲ್ಲಿ ಸುಮಾರು 100 ಶಾಸಕರಿಗೆ ಟಿಕೆಟ್ ನಿರಾಕರಿಸುವ ಸೂತ್ರ ಮುಂದಿಟ್ಟಿದ್ದಾರೆ.
ಪ್ರಸ್ತುತ ಉತ್ತರ ಪ್ರದೇಶ ವಿಧಾನಸಭೆಯಲ್ಲಿ 312 ಬಿಜೆಪಿ ಶಾಸಕರಿದ್ದಾರೆ. ಇವರಲ್ಲಿ ಬಹುತೇಕರು 2017ರ ಚುನಾವಣೆಗೂ ಮುನ್ನ ಬೇರೆ ಪಕ್ಷಗಳಿಂದ ವಲಸೆ ಬಂದವರು. ಅವರ ಸಾಧನೆ, ಪಕ್ಷ ನಿಷ್ಕ್ರೆಯನ್ನು ಅಳೆದು-ತೂಗಿ ಸುಮಾರು ನೂರು ಮಂದಿಗೆ ಟಿಕೆಟ್ ನೀಡದಿರುವ ನಿರ್ಧಾರದ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸುತ್ತಿದೆ.
ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಮತದಾರರ ವಿಶ್ವಾಸವನ್ಬಷ್ಟೇ ಅಲ್ಲ, ಬಿಜೆಪಿ ಆರೆಸ್ಸೆಸ್ ಕಾರ್ಯಕರ್ತರ ವಿಶ್ವಾಸವನ್ನೂ ಕಳೆದುಕೊಂಡ ಹಿನ್ನೆಲೆಯಲ್ಲಿ ಈ ರೀತಿಯ ನಿಷ್ಟೂರ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕರ್ನಾಟಕದ ಬಗ್ಗೆಯೂ ‘ಹೈ’ ಚಿಂತನೆ..?
ಉತ್ತರಪ್ರದೇಶ ಬಿಜೆಪಿಯಲ್ಲಿನ ಈ ಪ್ರಯೋಗ ಫಲಿಸಿದಲ್ಲಿ ಕರ್ನಾಟಕದಲ್ಲೂ ಅಂಥದ್ದೇ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಹೈಕಮಾಂಡ್ ಯೋಚಿಸುತ್ತಿದೆ. ಪ್ರಸ್ತುತ ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿ ಸಚಿವರಾಗಿರುವವರ ವೈಖರಿ ಬಗ್ಗೆ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅತೀವ ಬೇಸರ ಇದೆ. ಈ ಕುರಿತಂತೆ ವ್ಯಾಪಕ ದೂರುಗಳೂ ಹೈಕಮಾಂಡ್ ಬಳಿ ಸೇರಿದೆ. ಬಸವರಾಜ್ ಬೊಮ್ಮಾಯಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬೆಳಕಿಗೆ ಬಂದಿರುವ ಪ್ರಕರಣಗಳು ಹೈಕಮಾಂಡನ್ನೇ ಮುಜುಗರಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯನ್ನೇ ಬದಲಾಯಿಸಲು ಹಿಂದೇಟು ಹಾಕಲ್ಲ ಎಂಬುದು ವರಿಷ್ಠರ ನಿಲುವು.
ಈ ನಡುವೆ ಸ್ವಚ್ಚ ಆಡಳಿತ ಹಾಗೂ ಸಮರ್ಥ ಸಂಘಟನೆ ಸಂಬಂಧ ಕರ್ನಾಟಕದ ವಿಚಾರದಲ್ಲೂ ಬಿಜೆಪಿ ಹೈಕಮಾಂಡ್ ದೀಪಾವಳಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿನ ಈ ಬದಲಾವಣೆಯ ವೇಗವನ್ನು ಗಮನಸಿದರೆ ಮುಖ್ಯಮಂತ್ರಿ ಬದಲಾವಣೆ ಹಾಗೂ ಹೊಸ ರಾಜ್ಯಾಧ್ಯಕ್ಷರ ನೇಮಕ ಕಷ್ಟವಲ್ಲ. ಅಂತಹಾ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂಬ ಮಾತುಗಳೂ ಕೇಸರಿ ಪಾಳಯದಲ್ಲಿ ಹರಿದಾಡುತ್ತಿವೆ.