ಬೆಂಗಳೂರು: ಕೇಂದ್ರ ಗೃಹ ಸಚಿವಾಲಯದ ಮಾಜಿ ಅಧೀನ ಕಾರ್ಯದರ್ಶಿ ಆರ್.ವಿ.ಎಸ್. ಮಣಿ ಅವರು ಎಎನ್‌ಐ ಪಾಡ್‌ಕ್ಯಾಸ್ಟ್‌ನಲ್ಲಿ ಮಾಡಿದ ಹೇಳಿಕೆಗಳ ಕುರಿತು ಸ್ವತಂತ್ರ ಹಾಗೂ ಕಾಲಮಿತಿಯೊಳಗಿನ ತನಿಖೆ ನಡೆಸುವಂತೆ ಸಿಟಿಜನ್ ರೈಟ್ಸ್ ಫೌಂಡೇಶನ್ (ಸಿಆರ್‌ಎಫ್) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಸಿಆರ್‌ಎಫ್ ಅಧ್ಯಕ್ಷ ಕೆ.ಎ. ಪಾಲ್ ಅವರು ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಗೃಹ ಕಾರ್ಯದರ್ಶಿಗೆ ಸಲ್ಲಿಸಿರುವ ಮನವಿಯಲ್ಲಿ, ಮಣಿ ಅವರ ಹೇಳಿಕೆಗಳನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದು ಅಥವಾ ಸೂಕ್ತ ಸ್ವತಂತ್ರ ತನಿಖಾ ಸಂಸ್ಥೆಗೆ ಜವಾಬ್ದಾರಿ ವಹಿಸುವಂತೆ ಕೋರಿದ್ದಾರೆ.
‘ಹಿಂದೂ ಟೆರರಿಸಂ’ ಎಂದು ಪ್ರಯತ್ನ ಏಕೆ ನಡೆದಿತ್ತು? ಮುಂಬೈ ದಾಳಿ ಹಿಂದಿನ ಮರ್ಮ ಏನು? ಸಾಧ್ವಿ ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ವಿರುದ್ಧದ ಆರೋಪದ ಹಿಂದಿನ ಪಿತೂರಿ ಯಾರದ್ದು? ಪಾಕಿಸ್ತಾನದ ISI ಜೊತೆ ರಾಜಕೀಯ ಪಕ್ಷದ ನಂಟು ಏನು? ಎಂಬ ಬಗ್ಗೆ ನಿವೃತ್ತ MHA ಅಧಿಕಾರಿ ಆರ್.ವಿ.ಎಸ್. ಮಣಿ ನೀಡಿರುವ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಇದು ಗಂಭೀರ ಆರೋಪಗಳು. ಈ ಬಗ್ಗೆ ಸ್ವತಂತ್ರ ತನಿಖೆಗೆ CRF ಒತ್ತಾಯಿಸಿದೆ.
ಮಾಜಿ ಗೃಹ ಸಚಿವಾಲಯದ ಅಧಿಕಾರಿಯಾಗಿದ್ದ ಮಣಿ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಹಿಂದಿನ ಭಯೋತ್ಪಾದನಾ ತನಿಖೆಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿರುವುದರಿಂದ, ಅವುಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸುವುದು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪಾಡ್‌ಕ್ಯಾಸ್ಟ್‌ನ ಸಂಪೂರ್ಣ ವಿಡಿಯೊ ಮತ್ತು ಪ್ರತಿಲೇಖನವನ್ನು ಸಂಗ್ರಹಿಸಿ, ಮಣಿ ಅವರ ಹೇಳಿಕೆಯನ್ನು ದಾಖಲಿಸುವುದು, ಸಂಬಂಧಿತ ದಾಖಲೆಗಳನ್ನು ಸಂರಕ್ಷಿಸುವುದು ಹಾಗೂ ಅನ್ವಯವಾಗುವ ಕಾನೂನು ಪ್ರಕ್ರಿಯೆಯಂತೆ ತನಿಖೆ ನಡೆಸುವಂತೆ ಸಿಆರ್‌ಎಫ್ ಮನವಿ ಮಾಡಿದೆ. ತನಿಖೆಯ ಬಳಿಕ ದೊರೆಯುವ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅದು ಒತ್ತಾಯಿಸಿದೆ.
ಯಾವುದೇ ವ್ಯಕ್ತಿಯನ್ನು ಮುಂಚಿತವಾಗಿಯೇ ತಪ್ಪಿತಸ್ಥ ಎಂದು ನಿರ್ಧರಿಸುವ ಉದ್ದೇಶ ಈ ಮನವಿಗೆ ಇಲ್ಲ. ಸಂದರ್ಶನದಲ್ಲಿ ಪ್ರಸ್ತಾಪವಾದ ವಿಷಯಗಳ ಕುರಿತು ನಿಷ್ಪಕ್ಷಪಾತ, ಪಾರದರ್ಶಕ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಮಾತ್ರ ಕೋರಲಾಗಿದೆ ಎಂದು ಸಿಆರ್‌ಎಫ್ ಸ್ಪಷ್ಟಪಡಿಸಿದೆ.







































































