ಮೈಸೂರು: ಮೈಸೂರು ಭಾಗದ ಪ್ರಭಾವಿ ನಾಯಕ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ಇದೇ ವೇಳೆ, ಬಿಜೆಪಿಯ 10ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ನಾನು ಬಿಜೆಪಿಯಲ್ಲಿ ಸಕ್ರಿಯನಾಗಿಲ್ಲ, ಅಕ್ರಮವಾಗಿದ್ದೇನೆ ಎಂದು ಸಂದೇಶ್ ನಾಗರಾಜ್ ಹೇಳಿದರು.
ಬಿಜೆಪಿ ನಾಯಕರು ನನಗೆ ಮಾತ್ರವಲ್ಲ, ಎಚ್.ವಿಶ್ವನಾಥ್ ಅವರಿಗೂ ಅನ್ಯಾಯ ಮಾಡಿದರು. ಹಾಗಾಗಿ ನಾನು ಸಿದ್ದರಾಮಯ್ಯನವರ ಜೊತೆ ಮಾತನಾಡಿದ್ದೇನೆ. ಡಿಕೆಶಿ ಜೊತೆಗೂ ಚರ್ಚಿಸಿ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಂದೇಶ್ ನಾಗರಾಜ್ ತಿಳಿಸಿದರು.

























































