ಬಿಂಕದಕಟ್ಟಿ ಮೃಗಾಲಯಕ್ಕೆ ಕಾಡಿನ ರಾಜರ ಆಗಮನ.. ಅರ್ಜುನ ಹಾಗೂ ಧರ್ಮ ಎಂಬ ಎರಡು ಗಂಡು ಸಿಂಹಗಳ ಎಂಟ್ರಿ..
ವರದಿ: ಶ್ವೇತಾ ಕೊಣ್ಣೂರ
ಗದಗ್: ಇಷ್ಟು ದಿನ ಕೇವಲ ಹುಲಿ ಚಿರತೆ ಘರ್ಜನೆ ಕೇಳುತ್ತಿದ್ದ ಆ ಮೃಗಾಯಲದಲ್ಲೀಗ ಎರಡು ಸಿಂಹಗಳ ಆಗಮನವಾಗಿದೆ. ಇತ್ತೀಚೆಗಷ್ಟೇ ಪ್ರಾಣಿಸಂಗ್ರಹಾಲಯದಿಂದ ಕಿರು ಮೃಗಾಲಯಕ್ಕೆ ಬಡ್ತಿ ಪಡೆದಿದ್ದ ಆ ಮೃಗಾಲಯ ಪರಿಪೂರ್ಣವಾದಂತಾಗಿದೆ.
ಉತ್ತರ ಕರ್ನಾಟಕದ ಅತಿದೊಡ್ಡ ಮೃಗಾಲಯ ಎಂದು ಹೆಸರು ಪಡೆದಿರುವ ಗದಗನ ಈ ಬಿಂಕದಕಟ್ಟಿ ಮೃಗಾಲಯಕ್ಕೀಗ ಎರಡು ಗಂಡು ಸಿಂಹಗಳ ಆಗಮನವಾಗಿದೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಸಿಂಹಗಳ ಹಸ್ತಾಂತರಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದ ಪರಿಣಾಮ ಶುಕ್ರವಾರ ಬೆಳಗಿನ ಜಾವ ಈ ಸಿಂಹಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ತರಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲೇ ಹುಟ್ಟಿ ಬೆಳೆದಿರುವ 11 ವರ್ಷದ ಧರ್ಮ ಮತ್ತು ಅರ್ಜುನ ಹೆಸರಿನ ಎರಡು ಗಂಡು ಸಿಂಹಗಳು ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದ ವಿಶೇಷ ಅತಿಥಿಗಳಾಗಿ ಆಗಮಿಸಿವೆ. ಸಿಂಹಗಳ ನೈಸರ್ಗಿಕ ಆವಾಸ ಸ್ಥಾನದ ಮಾದರಿಯಲ್ಲೇ ಇಲ್ಲಿಯೂ ಪಂಜರವನ್ನು ರೂಪಿಸಲಾಗಿದ್ದು, 1000 ಚದರ ಮೀಟರ್ ಸ್ಥಳಾವಕಾಶದಲ್ಲಿ ಸಿಂಹಗಳು ಸ್ವಚ್ಛಂದವಾಗಿ ವಿಹರಿಸಲು ಅನುಕೂಲವಾಗುವಂಥ ವಾತಾವರಣ, ನೀರಿನ ಹೊಂಡ, ಕಲ್ಲಿನ ಬಂಡೆಗಳು, ಗಿಡ-ಮರಗಳನ್ನು ವ್ಯವಸ್ಥೆ ಮಾಡಲಾಗಿದೆ..
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲೆ ಹುಟ್ಟಿ ಬೆಳೆದಿದ್ದರೂ ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ವರೆಗೆ ಸಿಂಹಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವುದಿಲ್ಲ. ಅಲ್ಲದೇ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ 15 ರಿಂದ 30 ದಿನಗಳ ವರೆಗೆ ತಜ್ಞ ವೈದ್ಯರು ಮತ್ತು ಅವುಗಳನ್ನು ನೋಡಿಕೊಳ್ಳುವ ಸಿಬ್ಬಂದಿ ನಿಗಾದಲ್ಲಿಟ್ಟು, ಪರಿಸರಕ್ಕೆ ಹೊಂದಿಕೊಂಡ ನಂತರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಿದ್ದಾರೆ.
ಎರಡು ವರ್ಷದ ಹಿಂದಷ್ಟೇ ಜೋಡಿ ಹುಲಿಗಳು ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಯದ ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದವು. ಹುಲಿಗಳ ಆಗಮನದ ನಂತರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿತ್ತು. ಇದರಿಂದ ಪ್ರೇರಿತರಾಗಿ ಆಸ್ಟ್ರಿಚ್ ಸೇರಿದಂತೆ ವಿದೇಶಿ ಪಕ್ಷಿಗಳನ್ನು ತರಲಾಯಿತು. ಅದಾದ ನಂತರ ಹೈನಾಗಳು ಮೃಗಾಲಯ ಸೇರಿದ್ದು, ಈಗ ಜೋಡಿ ಸಿಂಹಗಳು ಮೃಗಾಲಯವನ್ನು ಮತ್ತಷ್ಟು ಆಕರ್ಷಣೀಯ ಗೊಳಿಸಲಿವೆ.