ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ದ ರೈತ ಸಂಘಟನೆಗಳು, ಪ್ರತಿಪಕ್ಷಗಳು ಸಿಡಿದೆದ್ದಿವೆ. ಕೃಷಿ ಕಾಯ್ದೆ ವಿರೋಧಿಸಿ ಸುದೀರ್ಘ ಹೋರಾಟದ ನಂತರ ಇಂದು ಮತ್ತೆ ಭಾರತ್ ಬಂದ್ ಮೂಲಕ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತವಾಯಿತು.
ಕರ್ನಾಟಕ ಕಿಸಾನ್ ಕಾಂಗ್ರೆಸ್ ನೇತೃತ್ವದಲ್ಲಿ ಬೆಂಗಳೂರು ಹೊರವಲಯದ ಹೊಸಕೋಟೆ ಬಳಿ ಬಾರತ್ ಬಂದ್ ಬೆಂಬಲಿಸಿ ರೈತರು ಮತ್ತು ಕಾರ್ಯಕರ್ತರು ಬೆಳ್ಳಂ ಬೆಳಿಗ್ಗೆಯೇ ಹೋರಾಟದ ಅಖಾಡಕ್ಕೆ ಇಳಿದರು.
ಭಾರತ್ ಬಂದ್ ಕರೆ ಬೆಂಬಲಿಸಿ ರಾಜ್ಯದಲ್ಲೂ ಪ್ರತಿಭಟನೆ ನಡೆದವು. ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಅವರ ಕರೆಯಂತೆ ಜಿಲ್ಲಾ ಕೇಂದ್ರಗಳಲ್ಲಿ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರು ಕೇಂದ್ರ ಕಿಸಾನ್ ಕಾಂಗ್ರೆಸ್ ವತಿಯಿಂದ ಹೊಸಕೋಟೆ ಬಳಿ ಪ್ರತಿಭಟನೆ ನಡೆಸಲಾಯಿತು. ಹೊಸಕೋಟೆ ಕೆಇಬಿ ಸರ್ಕಲ್ ಬಳಿ ಕಾರ್ಯಕರ್ತರು ಬಾರತ್ ಬಂದ್ ಬೆಂಬಲಿಸಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ತಿರುಪತಿ ಹೈವೇಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.