ಬೆಳಗಾವಿ: ಕೇಂದ್ರ ಸರ್ಕಾರದ ವಿರುದ್ದ ರೈತ ಸಂಘಟನೆಗಳು, ಪ್ರತಿಪಕ್ಷಗಳು ಸಿಡಿದೆದ್ದಿವೆ. ಕೃಷಿ ಕಾಯ್ದೆ ವಿರೋಧಿಸಿ ಸುದೀರ್ಘ ಹೋರಾಟದ ನಂತರ ಇಂದು ಮತ್ತೆ ಬೆಳಗಾವಿ ಗ್ರಾಮೀಣ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿತು.
ಕರ್ನಾಟಕ ಕಿಸಾನ್ ಕಾಂಗ್ರೆಸ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಬಾರತ್ ಬಂದ್ ಬೆಂಬಲಿಸಿ ರೈತರು ಮತ್ತು ಕಾರ್ಯಕರ್ತರು ಬೆಳ್ಳಂ ಬೆಳಿಗ್ಗೆಯೇ ಹೋರಾಟದ ಅಖಾಡಕ್ಕೆ ಇಳಿದರು.
ಭಾರತ್ ಬಂದ್ ಕರೆ ಬೆಂಬಲಿಸಿ ರಾಜ್ಯದಲ್ಲೂ ಪ್ರತಿಭಟನೆ ನಡೆದವು. ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಅವರ ಕರೆಯಂತೆ ಜಿಲ್ಲಾ ಕೇಂದ್ರಗಳಲ್ಲಿ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ವತಿಯಿಂದ ಮುಂಜಾನೆ ಹಿರೇ ಬಾಗೇವಾಡಿ ಟೋಲ್ ನಾಕಾದ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಮೂಲಕ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.