ಬೆಂಗಳೂರು: ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು 5.87 ಕೆ.ಜಿ. MDMA ವಶಪಡಿಸಿಕೊಂಡಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ ₹11.74 ಕೋಟಿ ಎಂದು ಅಂದಾಜಿಸಲಾಗಿದೆ.
ಯಲಹಂಕ ನ್ಯೂಟೌನ್ ಪೊಲೀಸರು ಕೆಂಚೇನಹಳ್ಳಿ ಬಳಿ ದಾಳಿ ನಡೆಸಿ ಗಂಗೊಂಡನಹಳ್ಳಿಯ 28 ವರ್ಷದ ಕಾರು ಮೆಕ್ಯಾನಿಕ್ ಇಮ್ರಾನ್ ಪಾಷಾ ಮತ್ತು ಹೊಸಕೋಟೆಯ 27 ವರ್ಷದ ಆಯೇಷಾ ಸಿದ್ದಿಕಿ ಅವರನ್ನು ಬಂಧಿಸಿದ್ದಾರೆ. ಇವರಿಂದ 5.72 ಕೆ.ಜಿ. MDMA ಜಪ್ತಿ ಮಾಡಲಾಗಿದೆ.
ನವದೆಹಲಿಯಿಂದ ಮಾದಕ ವಸ್ತುಗಳ ಪಾರ್ಸೆಲ್ ತಂದುಕೊಟ್ಟರೆ ₹1 ಲಕ್ಷ ನೀಡುವುದಾಗಿ ಆಮಿಷವೊಡ್ಡಲಾಗಿತ್ತು. ಅದರಂತೆ ಆರೋಪಿಗಳು ವಿಮಾನದ ಮೂಲಕ ದೆಹಲಿಗೆ ತೆರಳಿ, ಬಳಿಕ ಹರಿಯಾಣ ನೋಂದಣಿಯ ಟ್ಯಾಕ್ಸಿಯಲ್ಲಿ ಡ್ರಗ್ಸ್ಗಳನ್ನು ಬೆಂಗಳೂರಿಗೆ ತಂದಿದ್ದರು ಎನ್ನಲಾಗಿದೆ. ಪೂರೈಕೆಯ ಹಿಂದಿರುವವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತೊಂದು ಕಾರ್ಯಾಚರಣೆಯಲ್ಲಿ ಭಾರತೀನಗರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ 150.43 ಗ್ರಾಂ MDMA ವಶಪಡಿಸಿಕೊಂಡಿದ್ದಾರೆ. ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಎರಡೂ ಪ್ರಕರಣಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮಾದಕ ವಸ್ತುಗಳ ಪೂರೈಕೆದಾರರ ಪತ್ತೆಗೆ ತನಿಖೆ ಮುಂದುವರಿದಿದೆ.















































































