ಬೆಂಗಳೂರು: ಆದರಣೀಯ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದಲ್ಲೇ ನಾವು ಆಡಳಿತ ನಡೆಸುತ್ತಿದ್ದೇವೆ. ದಲಿತ ಸಮುದಾಯಗಳಿಗೆ ಹೆಚ್ಷು ಸೌಲಭ್ಯ ನೀಡಿದ್ದು ನಮ್ಮ ಸರ್ಕಾರ. ಸ್ವಾತಂತ್ರ್ಯ ಬಂದ ನಂತರ ಎಸ್ಟಿ ಸಮುದಾಯಕ್ಕೆ ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಿಸಿದ್ದು ಮೋದಿ ಸರ್ಕಾರ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಪರಿಶಿಷ್ಟ ಪಂಗಡಗಳ ಬೃಹತ್ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಾಯಕರೇ ನಿಜವಾದ ನಾಯಕರು, ಅವರು ಸ್ನೇಹಕ್ಕು ಸೈ ಸಮರಕ್ಕೂ ಸೈ. ಮೊಘಲರು, ಬ್ರಿಟೀಷರು, ಹೈದರ್, ಟಿಪ್ಪು, ಬಿಜಾಪುರ ಸುಲ್ತಾನರನ್ನು ಹಿಮ್ಮೆಟ್ಟಿಸಿದ್ದು ವಾಲ್ಮೀಕಿ ಸಮಾಜ. ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಸಲುವಾಗಿ ಇಂದು ಸೇರಿರುವ ನೀವುಗಳೆಲ್ಲ ಮತ್ತೊಮ್ಮೆ ದಲಿತರ ಸೇವೆ ಮಾಡಲು ಬಿಜೆಪಿಗೆ ಅವಕಾಶ ನೀಡಲು ಬಂದಿದ್ದೀರಿ. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆದರೂ ಸಹ ರಾಷ್ಟ್ರೀಯ ಅಧ್ಯಕ್ಷರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿರುವುದು ಸಂತಸದ ವಿಷಯ ಎಂದು ನುಡಿದರು.
ಸಿದ್ದರಾಮಯ್ಯ ಅವರೇ ಅಹಿಂದ ನನ್ನ ಹಿಂದೆ ಇದೆ ಹೇಳುತ್ತೀರಲ್ಲ ಎಲ್ಲಿ ಇದೆ ಹೇಳಿ. ಇಲ್ಲಿ ಬಂದು ನೋಡಿ ಅಹಿಂದ ಇಲ್ಲಿದೆ. ಅಹಿಂದ ಎಂದು ಹೇಳಿ ಬರೀ ಅವರμÉ್ಟ ಮುಂದೆ ಹೋಗಿ ಉಳಿದವರನ್ನು ಹಿಂದೆ ಬಿಟ್ಟರು. ಎಸ್ಸಿ ಎಸ್ಟಿ ಸಮುದಾಯದ ಮತ ಪಡೆದು ಅವರನ್ನು ಉದ್ಧಾರ ಮಾಡಿಲ್ಲ. ವಾಲ್ಮೀಕಿ ಸಮುದಾಯ ಜಾಗೃತವಾಗಿದೆ. ನೀವು ಸ್ವಾಭಿಮಾನದಿಂದ ಮುಂದೆ ನಡೆಯಿರಿ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಇದೇ ಬಳ್ಳಾರಿಯಲ್ಲಿ ಜೋಡೋ ಯಾತ್ರೆ ಮಾಡಿದ್ದರು. ಕಡಿಮೆ ಜನ ಸೇರಿದ್ದನ್ನು ನಾವು ನೋಡಿದ್ದೇವೆ. ಅದನ್ನೆ ಸುನಾಮಿ ಎಂದರು. ಈಗ ಬಂದು ನೋಡಿ ಇಂದು ಸುನಾಮಿಯ ಅಪ್ಪ ಸೇರಿದ್ದಾರೆ. ಬಳ್ಳಾರಿಯ ಕಾರ್ಯಕ್ರಮದಲ್ಲಿ ರಾಹುಲ್ ಬಳ್ಳಾರಿಗೆ ಮೂರು ಸಾವಿರ ಕೋಟಿ ನೀಡಿದ್ದೇವೆ ಎಂದು ಸುಳ್ಳು ಹೇಳಿದ್ದರು. ಆದರೆ ಅವರ ತಾಯಿ ಗೆದ್ದ ನಂತರ ಮೂರು ರುಪಾಯಿಯನ್ನು ಕೊಟ್ಟಿಲ್ಲ. ಬಳ್ಳಾರಿಯ ಜನರಿಗೆ ಮೋಸ ಮಾಡಿದ ಕಾಂಗ್ರೆಸ್‍ಗೆ ಈ ಬಾರಿ ತಕ್ಕ ಪಾಠ ಕಲಿಸಬೇಕು. ಹತ್ತಕ್ಕೆ ಹತ್ತರಲ್ಲಿ ಬಿಜೆಪಿ ಗೆಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಗೆ 6 ಸಾವಿರ ಕೋಟಿ ನೀಡಲಾಗಿದೆ. ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದೇವೆ ಎಂದು ವಿವರಿಸಿದರು.

ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಮಾತು ಕೊಟ್ಟಿದ್ದೆವು. ಶ್ರೀರಾಮುಲುಗೆ ಗೇಲಿ ಮಾಡಿದರು. ಇಂದು ಈ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವ ಮೂಲಕ ರಾಮುಲು ಮಾತು ಉಳಿಸಿಕೊಂಡಿದ್ದಾನೆ. ರಾಮುಲು ಬಗ್ಗೆ ಹಗುರವಾಗಿ ಮಾತನಾಡಬೇಡಿ. ಆತ ಸಮುದಾಯದ ಹೃದಯದ ಸಾಮ್ರಾಟ. ಸಿದ್ದರಾಮಯ್ಯ ಅವರು ರಾಮುಲು ಅವರನ್ನು ಪೆದ್ದ ಎಂದು ಜರಿದರು. ನೀನು ಭಾರಿ ಬುದ್ಧಿವನಂತಲ್ಲ. ಈ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿರಿ? ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಕೊಟ್ಟಿರಿ? ಹಾಲಮತ ಸಮುದಾಯಕ್ಕೂ ಮೋಸ ಮಾಡಿದ್ರಿ. ನಿಮ್ಮ ಕ್ಯಾಬಿನೆಟ್ ನಲ್ಲಿ ಒಬ್ಬನೇ ಒಬ್ಬ ಕುರುಬ ಸಮುದಾಯದ ಸಚಿವರು ಇರಲಿಲ್ಲ. ಯಡಿಯೂರಪ್ಪ ಅವರು ಕುರುಬರಿಗೆ, ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಬಿಜೆಪಿ ಮಾತ್ರ ಎಂದು ತಿಳಿಸಿದರು.
ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಎಸ್ಸಿ ಎಸ್ಟಿ ಸಮುದಾಯಕ್ಕಾಗಿ 100 ಹಾಸ್ಟೆಲ್ ಮಾಡುತ್ತೇವೆ. ಸಾಮಾಜಿಕ, ಆರ್ಥಿಕವಾಗಿ ನ್ಯಾಯ ಕೊಡಲು ನಾವು ಬದ್ಧ. ನಾವು ಮೀಸಲಾತಿ ಹೆಚ್ಚಿಸುವ ಮೂಲಕ ಸಂವಿಧಾನಬದ್ಧ ಹಕ್ಕನ್ನು ನಿಮಗೆ ಕೊಟ್ಟಿದ್ದೇವೆ. ಇದುವರೆಗೂ ದೇಶದ ಜನರಿಗೆ ಮೋಸ ಮಾಡುತ್ತ ಬಂದ ಕಾಂಗ್ರೆಸ್ ನ ಬೇರು ಸಮೇತ ಕಿತ್ತೊಗೆಯಲು ನೀವೆಲ್ಲ ಸಂಕಲ್ಪ ಮಾಡಿ. ಇದೊಂದು ಸಂಕಲ್ಪಗಳ ಸಮಾವೇಶವಾಗಿದೆ. ಕಾಂಗ್ರೆಸ್ ಗೆ ತಕ್ಕಪಾಠ ಕಲಿಸೋಣ ಎಂದು ಮನವಿ ಮಾಡಿದರು.
ರಾಜ್ಯದ ಸಚಿವ ಶ್ರೀರಾಮುಲು ಅವರು ಮಾತನಾಡಿ, ಈ ನವಶಕ್ತಿ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಿದ್ದೇವೆ. ರಾಮನಿಗೆ, ಹನುಮನಿಗೆ ಶಕ್ರಿ ತುಂಬಿದ ಬಿಜೆಪಿ ಬರುವ ದಿನಗಳಲ್ಲಿ ಲಂಕಾ(ಕಾಂಗ್ರೆಸ್) ದಹನ ಮಾಡಬೇಕಿದೆ. ಈ ಜನಶಕ್ತಿ, ಜನಾಶೀರ್ವಾದ ನೋಡಿದರೆ ನಮ್ಮ ಸರ್ಕಾರ, ನಮ್ಮ ಪಕ್ಷದ ಪರ ಬರುವ ದಿನದಲ್ಲಿ ಸ್ಪಷ್ಟ ಬಹುಮತ ಬರಲಿದೆ. ಈ ಸಮಾವೇಶದ ಮೂಲಕ ಕಾಂಗ್ರೆಸ್ ದಹನ ಆರಂಭವಾಗಿದೆ ಎಂದು ವಿಶ್ಲೇಷಿಸಿದರು.
7 ಸಾವಿರ ಬೇಡ ಪಡೆಗಳು ನಮ್ಮಲ್ಲಿ ಇದ್ದವು. ವಿಜಯನಗರ ಸಾಮ್ರಾಜ್ಯ ನಿರ್ಮಿಸಿದ್ದು ಅದೇ ಪಡೆಗಳು. 2023ರ ಚುನಾವಣೆಯಲ್ಲಿ ಈ ಜನಶಕ್ತಿಯ ಆಶೀರ್ವಾದ ಬಿಜೆಪಿ ಮೇಲೆ ಇರಲಿದೆ. 40 ವರ್ಷಗಳ ಹೋರಾಟವನ್ನು ಅರಿತು ಸಿಎಂ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದರು. ಅವರಿಗೆ ಎಂಟು ಗುಂಡಿಗೆ ಇವೆ. ನಮ್ಮ ಎಸ್ಸಿ ಎಸ್ಟಿ ಸಮುದಾಯದ ಪಾಲಿಗೆ ಬೊಮ್ಮಾಯಿ ದಕ್ಷಿಣ ವಾಜಪೇಯಿ ಆಗಿದ್ದಾರೆ. ದಲಿತ ಪರ ಕೇವಲ ಮೊಸಳೆ ಕಣ್ಣೀರು ಸುರಿಸಿದ ಕಾಂಗ್ರೆಸ್ ದಲಿತರಿಗೆ ಮೀಸಲಾತಿ ಹೆಚ್ಚಿಸಲೇ ಇಲ್ಲ. 2013ರಿಂದ 2018ರ ವರೆಗೆ ಅಧಿಕಾರದಲ್ಲಿದ್ದಾಗ ನಿಮಗೆ ದಲಿತರು ನೆನಪಾಗಲಿಲ್ಲವೆ? ಅವರಿಗೆ ಮೀಸಲಾತಿ ಹೆಚ್ಷಿಸಬೇಕೆಂಬ ಕಾಳಜಿ ಬರಲಿಲ್ಲವೆ ಸ್ವಾಮಿ ನಿಮಗೆ? ಸಿಎಂ ಈಗ ಸುದರ್ಶನ ಚಕ್ರ ಬಿಟ್ಟಿದೆ ಅದು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಶಿರಚ್ಛೇದನ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ಶಕ್ತಿ ನೋಡಲು ಬನ್ನಿ. ಮೀಸಲಾತಿ ಕೊಟ್ಟಿದ್ದು ನಾವು. ಆದರೆ ನಾವು ಕೊಟ್ಟಿದ್ದೇವೆ ಎಂದು ಬಡಿವಾರ ಕೊಚ್ಷಿಕೊಳ್ಳುತ್ತೀರಲ್ಲ ನಾಚಿಕೆ ಆಗಲ್ಲವೆ? ಎಂದು ಪ್ರಶ್ನಿಸಿದರು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹೇಗೆ ನಮ್ಮ ಸಮುದಾಯಗಳಿಗೆ ಸಮಾನತೆ ಕೊಟ್ಟರೋ ಹಾಗೆ ಇವತ್ತು ಬೊಮ್ಮಾಯಿ ಅವರು ನಮ್ಮ ಸಮುದಾಯಗಳಿಗೆ ಮೀಸಲಾತಿ ನೀಡಿ ನಮ್ಮ ಸಮಾಜಗಳನ್ನು ಉದ್ಧಾರ ಮಾಡಲು ಮುಂದಾಗಿದ್ದಾರೆ. ಇದುವರೆಗೂ ಇಡೀ ಸಮುದಾಯ ನನಗೆ ನೀಡಿದ ಆಶೀರ್ವಾದ, ಬೆಂಬಲಕ್ಕೆ ಇಂದು ನಾನು ನಿಮ್ಮ ಋಣ ತೀರಿಸಿದ್ದೇನೆ. ಶ್ರೀರಾಮುಲು ಈ ಹಿಂದೆ ಮಾತು ಕೊಟ್ಟಿದ್ದರೆ ಅದು ನನ್ನೊಬ್ಬನದೇ ಅಲ್ಲ. ನನ್ನ ಹಿಂದೆ ಇಡೀ ಪಕ್ಷ ಇದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ದೇಶದ ಒಳಿತಿಗಾಗಿ ಅರಸುರಾಗಿ, ರಾಜರಾಗಿ, ಪಾಳೆಗಾರರಾಗಿ ಕೆಲಸ ಮಾಡಿದ್ದು ವಾಲ್ಮೀಕಿ ಸಮುದಾಯ. ಹಕ್ಕಬುಕ್ಕರು, ಸಿಂಧೂರ ಲಕ್ಷ್ಮಣ, ಸುರುಪುರ ಅರಸರು, ಏಕಲವ್ಯ ಸೇರಿದಂತೆ ಅನೇಕರು ದೇಶಕ್ಕಾಗಿ ಬದುಕಿದರು. ನಮ್ಮ ಸಮುದಾಯಕ್ಕೆ ಹೊಡೆತ ಬಿದ್ದಿದ್ದು ಬ್ರಿಟಿಷರಿಂದ. ನಮ್ಮ ಆಸ್ತಿ, ಆಯುಧ ಕಳೆದುಕೊಂಡ ನಂತರ ಹಲಗಲಿಯ ಬೇಡರಿಂದ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಇಂದು ನಮ್ಮ ಸಮುದಾಯ ಕೇವಲ ಬಿಜೆಪಿ ಪರ ಇದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಕೇಂದ್ರ-ರಾಜ್ಯದ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರು ಎಸ್.ಟಿ. ಸಮುದಾಯದ ಲಕ್ಷಾಂತರ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಳ್ಳಾರಿ ನಗರದಾದ್ಯಂತ ಹಾಗೂ ಸಮಾವೇಶದ ಸ್ಥಳವನ್ನು ಪಕ್ಷದ ಬಾವುಟ ಹಾಗೂ ಪ್ಲೆಕ್ಸ್‍ಗಳಿಂದ ಅಲಕೃಂತಗೊಳಿಸಲಾಗಿತ್ತು. ವಿವಿಧ ಕಲಾ ತಂಡಗಳಿಂದ ಕಾರ್ಯಕ್ರಮ ಏರ್ಪಡಿಸಿದ್ದು ಅದು ಜನರ ಮನ ಸೆಳೆಯಿತು.
























































