ಕಬ್ಬು ಎಫ್ ಆರ್ ಪಿ ದರ ಏರಿಕೆಗ್ಗೆ ಒತ್ತಾಯಿಸಿ ನ.22ರಿಂದ ತೀವ್ರ ಹೋರಾಟ. ಕಬ್ಬು ಬೆಳೆಗಾರರಿಂದ ಸಿಎಂ ಮನೆ ಮುಂದೆ ನಿರಂತರ ಧರಣಿ..
ಬೆಂಗಳೂರು: ಕಬ್ಬಿನ ಎಫ್ ಆರ್ ಪಿ ಹೆಚ್ಚುವರಿ ದರ ನಿಗದಿಗೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಕಬ್ಬು ಬೆಳೆಗಾರ ರೈತರು ಮುಖ್ಯಮಂತ್ರಿ ಮನೆ ಮುಂದೆ ನ್ಯಾಯ ಸಿಗುವ ತನಕ ನಿರಂತರ ಆಹೋ ರಾತ್ರಿ ಧರಣಿ ನಡೆಸಲಾಗುವುದು ಎಂದು ಸಮರ ಸಾರಿದ್ದಾರೆ.
ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು 20ರ ಒಳಗಾಗಿ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿ ಸಕ್ಕರೆ ಸಚಿವರು ಈತನಕ ಯಾವುದೇ ನಿರ್ಧಾರ ಪ್ರಕಟಿಸಿದೆ ಇರುವುದನ್ನು ಖಂಡಿಸಿ, ಮುಖ್ಯಮಂತ್ರಿಗಳ ಎರಡು ಬಾರಿ ಭೇಟಿ ಮಾಡಿದಾಗಲೂ ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಆದ್ದರಿಂದ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕಬ್ವು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರ ರೈತರು ನಾಲ್ಕು ತಿಂಗಳಿಂದಲೂ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸಬೂಬು ಹೇಳುತ್ತಾ ತ್ಯಾಪೆ ಹಾಕುತ್ತಿರುವುದು ಸರಿಯಲ್ಲ, ರೈತರ ಬದುಕು ಬೆಕ್ಕಿಗೆ ಚೆಲ್ಲಾಟ ಇಲಿಗೆ ಸಂಕಟ ಎನ್ನುವಂತಾಗಿದೆ ಎಂದರು.
ಬೆಳೆಗಾರರ ಒತ್ತಾಯಗಳ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವವರೆಗೆ ನಿರಂತರ ಆಹೋ ರಾತ್ರಿ ಹೋರಾಟ ನಡೆಸಲು ರಾಜ್ಯ ಸಮಿತಿ ತೀರ್ಮಾನಿಸಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು,
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಗಂಭೀರ ಪ್ರಯತ್ನ ನಡೆಸದೆ ಸದಾ ರೈತರ ಪರ ಎಂದು ಹೇಳಿಕೆ ನೀಡುತ್ತಾ, ಸರ್ಕಾರ ರೈತರ ಮೂಗಿಗೆ ತುಪ್ಪ ಸವರೋ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಬೆಳಗಾವಿ ದಾವಣಗೆರೆ, ಧಾರವಾಡ , ಉತ್ತರ ಕನ್ನಡ, ಮೈಸೂರು , ಹಡಗಲಿ, ಗುಲ್ಬರ್ಗ , ಬಿಜಾಪುರ ಬಾಗಲಕೋಟೆ ,ಗದಗ್ ಚಾಮರಾಜನಗರ, ಹಾಸನ ಬೀದರ್, ಚನ್ನರಾಯಪಟ್ಟಣ, ಕೊಪ್ಪಳ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರು ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೆ , ರೈತರ ಕಣ್ಣಿಗೆ ಮಣ್ಣೆರಚುತ್ತಿದ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳು:
- ಕರ್ನಾಟಕ ರಾಜ್ಯಕ್ಕಿಂತ ಸಕ್ಕರೆ ಇಳುವರಿ ಕಡಿಮೆ ಬರುವ ಪಂಜಾಬ್ ರಾಜ್ಯದಲ್ಲಿ 3800 ಉತ್ತರ ಪ್ರದೇಶದಲ್ಲಿ 3500 ಗುಜರಾತ್ ನಲ್ಲಿ 4400 ದರ ರಾಜ್ಯ ಸರ್ಕಾರಗಳೇ ನಿಗದಿ ಮಾಡಿದ್ದಾರೆ , ತಮಿಳುನಾಡಿನಲ್ಲಿ ಕಬ್ಬು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೆ ಬರಿಸುತ್ತವೆ, ಇದನ್ನು ಗಮನಿಸಿ ಎಫ್ ಆರ್ ಪಿ ಬೆಲೆಯನ್ನ ಕನಿಷ್ಠ ಇಳುವರಿಗೆ ಟನ್ಗೆ 3500 ರೂ ನಿಗದಿ ಮಾಡಬೇಕು.
- ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಲಗಾಣಿ ಹೆಚ್ಚು ಪಡೆಯುತ್ತಿದ್ದಾರೆ ಕಬ್ಬು ಕಟಾವು 16 ತಿಂಗಳಾಗುತ್ತಿದೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್ ಆಧಾರದ ದರ ಕಡಿತ ಮಾಡಬೇಕು, ಕಾನೂನು ಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಚೀಟಿಂಗ್ ಕೇಸ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
- ಕಬ್ಬು ಕಟಾವು16-18 ತಿಂಗಳು ವಿಳಂಬವಾಗುತ್ತಿದೆ ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ, ಈ ರೀತಿ ವಿಳಂಬವಾಗಿ ಕಟಾವು ಮಾಡಿದ ಕಬ್ಬಿಗೆ ವಿಳಂಬದ ಅವಧಿಗೆ ಶೇಕಡ 15 ಬಡ್ಡಿ ಸೇರಿಸಿ ಹೆಚ್ಚುವರಿ ಹಣ ಕಾರ್ಖಾನೆಗಳು ನೀಡುವಂತಾಗಬೇಕು.
- ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ಕಡಿತಗೊಳಿಸಬೇಕು, ಸಕ್ಕರೆ ಕಾರ್ಖಾನೆ ಫೀಲ್ಡ್ ಮೆನ್ಗಳು ಬಿಲ್ ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು.
- ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಒಪ್ಪಂದಪತ್ರ ಜಾರಿ ಮಾಡಬೇಕು, ಒಪ್ಪಂದ ಪತ್ರ ರೈತರಿಗೂ ಕೊಡಬೇಕು.
- ಅತಿವೃಷ್ಟಿ ಮಳೆಹಾನಿ ಕಾರಣ ಭತ್ತದ ಬೆಳೆ ಸ್ವಲ್ಪಮಟ್ಟಿಗೆ ಇಳುವರಿ ಕಡಿಮೆಯಾಗುತ್ತಿದೆ, ಬೆಲೆ ಕಡಿಮೆ ಯಾಗುವ ಕಾರಣ ಕೂಡಲೇ ಭತ್ತ ಕಟಾವು ಆರಂಭಕೆ ಮುನ್ನ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು.
- ವಿದ್ಯುತ್ ಖಾಸಗಿಕರಣ ಕೈಬಿಡಬೇಕು ಕೃಷಿ ಪಂಪ್ಸೆಟ್ ಗಳಿಗೆ ಮೀಟರ್ ಅಳವಡಿಸುವುದು ಬೇಡ.
- ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪದ್ಧತಿಯನ್ನು ಪರಿಗಣಿಸಿ ಸಾಲ ನೀಡುವ ಪದ್ಧತಿ ಕೈಬಿಡಬೇಕು ರಿಸರ್ವ್ ಬ್ಯಾಂಕ್ ಮುಖ್ಯಸ್ಥರು ಸಭೆ ಕರೆಯುವ ಭರವಸೆ ನೀಡಿದಂತೆ ತಕ್ಷಣವೇ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು.
- ಸರ್ಕಾರ ನೀಡುವ ಪರಿಹಾರಧನ ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಬ್ಯಾಂಕುಗಳು ಸಾಲದ ಖಾತೆಗಳಿಗೆ ಜಮಾ ಮಾಡಬಾರದು. ಎನ್ನುವ ನಿಯಮವನ್ನು ಉಲ್ಲಂಗಿಸಿ ಸಿಬಿಲ್ ಸ್ಕೋರಿಲ್ಲ ಎಂದು ಸಬೂಬು ಹೇಳುತ್ತಾ ರೈತರಿಗೆ ಸಾಲ ಕೊಡುವುದನ್ನು ನಿಲ್ಲಿಸುತ್ತಿದ್ದಾರೆ, ಈ ವಿಚಾರದಲ್ಲಿ ರೈತರಿಗಾಗುವ ಅನ್ಯಾಯ ತಡೆಯಬೇಕು.
- ಬಗರ್ ಹುಕುಂ ಸಾಗುವಳಿ ಹತ್ತಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ,ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ನೀಡಬೇಕು.





















































