ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರಿದ್ದು ಬಿಜೆಪಿಯು ತನ್ನ ಉಮೇದುವಾರರ ಹೆಸರುಗಳನ್ನು ಘೋಷಿಸಿದೆ.
ಉಪ ಚುನಾವಣೆಗೆ ಸಂಬಂಧಿಸಿ ಎಲ್ಲಾ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಭಾರತೀಯ ಜನತಾ ಪಕ್ಷದ ರಾಜ್ಯ ಉಸ್ತುವಾರಿಗಳೂ ಆದ ಅರುಣ್ ಸಿಂಗ್ ಅವರು ಪ್ರಕಟಿಸಿದ್ದಾರೆ.
ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹುರಿಯಾಳಾಗಿ ದಿವಂಗತ ಅಂಗಡಿ ಪತ್ನಿ ಮಂಗಳಾ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಶರಣು ಸಲಗರ್ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಪ್ರತಾಪಗೌಡ ಪಾಟೀಲ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿರುವರು ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.