ನವದೆಹಲಿ: ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದ 38 ಸ್ಥಳಗಳಲ್ಲಿ ಅಕ್ಟೋಬರ್ 23ರಂದು ನಡೆಸಿದ ಬಹುರಾಜ್ಯ ಕಾರ್ಯಾಚರಣೆ ‘ಆಪರೇಷನ್ ಟ್ರೈಡೆಂಟ್’ ಮೂಲಕ ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಗುರಿಯಾಗಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕಾರ್ಯಾಚರಣೆಯಲ್ಲಿ ₹100 ಕೋಟಿ ಮೌಲ್ಯದ ಹವಾಲಾ ವಹಿವಾಟು ಪತ್ತೆಯಾಗಿದ್ದು, 1,424 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ₹17.82 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದ್ದು, 500 ಡಿಟೋನೇಟರ್ಗಳು ಮತ್ತು ₹12 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಗಳ ಮೂಲಕ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಜಾಲವನ್ನು ‘ಡೆತ್ ಟ್ರಯಾಂಗಲ್ ಕಾರಿಡಾರ್’ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.
ಕೇಂದ್ರ ಸಂಸ್ಥೆಗಳ ಮಾದಕ ವಸ್ತು ವಿರೋಧಿ ತಂಡಗಳು ಹಾಗೂ ಮೂರು ರಾಜ್ಯಗಳ ಪೊಲೀಸ್ ಪಡೆಗಳು ಸಮನ್ವಯದಿಂದ ನಡೆಸಿದ ಕಾರ್ಯಾಚರಣೆಯನ್ನು ಅವರು ಶ್ಲಾಘಿಸಿದ್ದಾರೆ.
ಮಾದಕ ವಸ್ತು ಕಳ್ಳಸಾಗಣೆ, ಅಕ್ರಮ ಹಣಕಾಸು ವಹಿವಾಟು ಮತ್ತು ಈ ಜಾಲಗಳಿಗೆ ಸಂಬಂಧಿಸಿದ ಆಸ್ತಿಗಳ ವಿರುದ್ಧ ಕ್ರಮ ಮುಂದುವರಿಯಲಿದೆ. 2029ರ ಡಿಸೆಂಬರ್ 31ರೊಳಗೆ ಇಂತಹ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಗೆ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
















































































