ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿ ಮಾಜಿ ಸಚಿವ ಬಿ. ರಮಾನಾಥ ರೈ ಗುರುವಾರ ನಾಮಪತ್ರ ಸಲ್ಲಿಸಿದರು. ಬಿ.ಸಿ.ರೋಡಿನ ವಿಧಾನಸೌಧದ ಚುನಾವಣಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಮೆರವಣಿಗೆ ಆರಂಭಕ್ಕೂ ಮೊದಲು ಬಿ. ರಮಾನಾಥ ರೈ ಅವರು ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೊಡಂಕಾಪು ಚರ್ಚ್‍ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಿತ್ತಬೈಲು ಮೊಯಿದ್ದೀನ್ ಜುಮ್ಮಾ ಮಸೀದಿ, ಕೆಳಗಿನಪೇಟೆ ಮಸೀದಿಯಲ್ಲೂ ಪ್ರಾರ್ಥಿಸಿದರು. ನಂತರ ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ, ನನ್ನ ಸುದೀರ್ಘ ಜನಸೇವೆಯ ಜೀವನದಲ್ಲಿ 9 ನೇ ಬಾರಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಂತಹುದೇ ಪ್ರತೀಕೂಲ ವಾತಾವರಣದಲ್ಲಿ ನನ್ನ ಜೊತೆನಿಂತ ನಿಮ್ಮ ಋಣವನ್ನು ಜನ್ಮಕ್ಕೂ ತೀರಿಸಲು ಸಾಧ್ಯವಿಲ್ಲ ಎಂದರು.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನನ್ನೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ, ನನ್ನನ್ನು ಆಶೀರ್ವದಿಸಿದ ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅಧಿಕಾರದಲ್ಲಿದ್ದಾಗಲೂ ನಾನು ತಪ್ಪುಗಳನ್ನು ಮಾಡಿಲ್ಲ, ತಮಗೆಲ್ಲ ಅಗೌರವವನ್ನುಂಟು ಮಾಡುವ ಯಾವುದೇ ಕೃತ್ಯವನ್ನು ಮಾಡಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ನನ್ನನ್ನು ಅಪಪ್ರಚಾರದಿಂದ ಸೋಲಿಸಿದರು. ಸೋತ ಬಗ್ಗೆ ನನಗೆ ಬೇಸರವಿಲ್ಲ, ಆದರೆ ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ. ಈ ಚುನಾವಣೆಯಲ್ಲಿ ತಮ್ಮೆಲ್ಲರ ಸಹಕಾರದಿಂದ ಬಂಟ್ವಾಳದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ ಎಂದು ಹೇಳಿದರು.
ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕ ರೋಝಿ ಜಾನ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಸುಳ್ಯ ಅಭ್ಯರ್ಥಿ ಕೃಷ್ಣಪ್ಪ ಜಿ., ಪಕ್ಷ ಪ್ರಮುಖರಾದ ಎಂ.ಕೆ.ಎಂ.ಅಶ್ರಫ್, ಶೀಬಾ ರಾಮಚಂದ್ರನ್, ಜೋಕಿಂ ಡಿಸೋಜ, ಧನಂಜಯ ಅಡ್ಪಂಗಾಯ, ವೆಂಕಪ್ಪ ಗೌಡ, ನಝೀರ್ ಬಜಾರ್, ಕೌಶಲ್ ಶೆಟ್ಟಿ, ರಾಕೇಶ್ ಮಲ್ಲಿ, ಕೃಪಾ ಅಮರ್ ಆಳ್ವ, ಪ್ರಸಾದ್ ಪಾಣಾಜೆ, ಲುಕ್ಮಾನ್ ಬಂಟ್ವಾಳ, ಫಾರೂಕ್ ಬಯಬೆ, ಉಸ್ಮಾನ್ ಕರೋಪಾಡಿ, ಬೇಬಿ ಕುಂದರ್, ಸುದೀಪ್ ಶೆಟ್ಟಿ, ಪಿಯೂಸ್ ಎಲ್. ರೊಡ್ರಿಗಸ್, ಬಿ.ಎಚ್.ಖಾದರ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಎಸ್.ಮುಹಮ್ಮದ್, ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಜಯಂತಿ ಪೂಜಾರಿ, ಮುಹಮ್ಮದ್ ಶರೀಫ್, ಜನಾರ್ದನ ಚೆಂಡ್ತಿಮಾರ್, ಸುಭಾಶ್ಚಂದ್ರ ಶೆಟ್ಟಿ, ಉಮೇಶ್ ಸಪಲ್ಯ, ಸಂಜೀವ ಪೂಜಾರಿ, ನಾರಾಯಣ ನಾಯ್ಕ್, ವಾಸು ಪೂಜಾರಿ, ಸಿದ್ದೀಕ್ ಬೊಗೋಡಿ, ಸಿದ್ದೀಕ್ ಸರವು, ನ್ಯಾಯವಾದಿಗಳಾದ ಚಂದ್ರಶೇಖರ ಪೂಜಾರಿ, ಚಿದಾನಂದ ಕಡೇಶ್ವಾಲ್ಯ, ಸುರೇಶ್ ಕುಲಾಲ್ ನಾವೂರು, ಉಮಾಕರ ಮೊದಲಾದ ಮುಖಂಡರು ಇ ಸಂದರ್ಭದಲ್ಲಿ ಉಪಸ್ಥಿತರಿದ್ದರು..