ಬೆಂಗಳೂರು: ಆಶಾ ಕಾರ್ಯಕರ್ತೆಯರ ಹೋರಾಟದಿಂದ ಬೆಚ್ಚಿ ಬಿದ್ದಿರುವ ರಾಜ್ಯ ಸರ್ಕಾರ ಇದೀಗ ಆಶಾಗಳ ಬೇಡಿಕೆಗಳನ್ನೂ ಈಡೇರಿಸುವ ಚಿಂತನೆ ನಡೆಸಿದೆ.
ಹಲವಾರು ವರ್ಷಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇದೀಗ ಫೆಬ್ರವರಿ ೧೩ರಿಂದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ವಿಧಾನಸೌಧ ಚಲೋ ಹೋರಾಟ ಕೈಗೊಂಡಿದ್ದಾರೆ. ಬೆಂಗಳೂರು ಫ್ರೀಡಂ ಪಾರ್ಕ್’ನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸುತ್ತಿದ್ದಾರೆ.
ಇದರ ಬೆನ್ನಲ್ಲೇ, ಆಶಾ ಕಾರ್ಯಕರ್ತೆಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಹೋರಾಟ ಕೈಗೊಂಡಿರುವ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿದ ಸಚಿವರು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಭರವಸೆ ಹೀಗಿದೆ:
ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ವೇತನ ನಿಗದಿಪಡಿಸುವ ಬೇಡಿಕೆ ಈಡೇರಿಸಲು ಶೀಘ್ರ ಕ್ರಮ.
ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ರಾಜ್ಯ ಸರ್ಕಾರ ನೀಡುವ ರೂ. 5,000 ಜೊತೆಗೆ ರೂ.2,000 ಸೇರಿಸಿ ಒಟ್ಟು ರೂ.7,000 ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುವುದು.
ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ನಿವಾರಣೆಗೆ ತ್ವರಿತ ಕ್ರಮ.
ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನದ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಂಬಂಧ, ಪ್ರೋತ್ಸಾಹಧನದ ವಿವರಗಳನ್ನು ಗಮನಿಸಲು ಆಶಾ ನಿಧಿ ತಂತ್ರಾಂಶ ಅವಕಾಶ. ಈ ಮೂಲಕ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಡೆದ ಪ್ರೋತ್ಸಾಹಧನದ ವಿವರಗಳನ್ನು ವೀಕ್ಷಿಸಲು ಆಶಾ ಕಾರ್ಯಕರ್ತೆಯರಿಗೆ ಅವಕಾಶ.
ಪ್ರೋತ್ಸಾಹಧನ ಸಿಗದಿದ್ದರೆ ಅದನ್ನ 6 ತಿಂಗಳ ಕಾಲಮಿತಿಯೊಳಗೆ ಪರಿಹರಿಸುವುದು.
ಮ್ ಬೇಸ್ಟ್ ಇನ್ಸೆಂಟಿವನ್ನು ಆಶಾ ನಿಧಿ ತಂತ್ರಾಂಶದ ಮುಖಾಂತರವೇ ನೇರವಾಗಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುವುದು.
ಆಶಾ ಕಾರ್ಯಕರ್ತೆಯರ ಚಟುವಟಿಕೆಗಳನ್ನು ದಾಖಲಿಸಲು ಪ್ರತ್ಯೇಕವಾದ ಮೊಬೈಲ್ ಆ್ಯಪ್ ವಿನ್ಯಾಸ ಮಾಡಲಾಗುವುದು.
ಆಶಾ ಕಾರ್ಯಕರ್ತೆಯರಿಗೂ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿ ಸಿಗಲಿದೆ.
ಆಶಾ ಕಾರ್ಯಕರ್ತೆಯರಿಗೂ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗುವುದು..
ರಾಜ್ಯದ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ. ಈಗಾಗಲೇ ಆಶಾ ಸಹೋದರಿಯರ ಹಲವು ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ. ರಾಜ್ಯದ ಮಹಿಳೆಯರ ಕಾಳಜಿ ನಮ್ಮ ಜವಾಬ್ದಾರಿಯಾಗಿದೆ.#AshaWorkers pic.twitter.com/6wdNt6npGd
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 13, 2024


































































