ಬೆಂಗಳೂರು: ಕೋವಿಡ್ ಸಂಕಟ ಕಾಲದಲ್ಲಿ ತಮ್ಮನ್ನು ನಿರ್ಲಕ್ಷಿಸಿರುವ ಸರ್ಕಾರದ ವಿರುದ್ದ ಆಶಾ ಕಾರ್ಯಕರ್ತೆಯರು ನಿಷ್ಟೂರ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮೇ 24ರಂದು ಭಾರತಾದ್ಯಂತ ಮುಷ್ಕರ ಘೋಷಿಸಿದೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸ್ಕೀಮ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾದ ರಮಾ ಟಿ.ಸಿ ಮುಷ್ಕರದ ಅನಿವಾರ್ಯತೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಮಾಧ್ಯಮ ಹೇಳಿಕೆ ಹೀಗಿದೆ:
ಕೇಂದ್ರ ಬಿಜೆಪಿ ಸರ್ಕಾರದ ಸ್ವಹಿತಾಸಕ್ತಿ-ಕೇಂದ್ರಿತ, ಅಮಾನುಷ ಮತ್ತು ಜನವಿರೋಧಿ ನೀತಿಗಳಿಂದಾಗಿ ದೇಶದಲ್ಲಿ ಕೋವಿಡ್-19 ಸಂಬಂಧಿತ ಸಮಸ್ಯೆಗಳು ತಾರಕಕ್ಕೆ ಏರಿರುವುದನ್ನು ನಾವೆಲ್ಲರೂ ಆತಂಕದಿಂದ ಗಮನಿಸುತ್ತಿದ್ದೇವೆ. ಹಲವಾರು ತಿಂಗಳುಗಳಿಂದ
ಪತ್ರಿಕೆಗಳಲ್ಲಿ ವರದಿಯಾಗುತ್ತಿರುವಂತೆ, ದೇಶದ ಎಲ್ಲಾ ರಾಜ್ಯಗಳಲ್ಲೂ ಕೊರೋನಾದ ಎರಡನೇ ಅಲೆ ವ್ಯಾಪಕವಾಗಿ ಹಬ್ಬಿ ಸಾವಿರಾರು ಜನರ ಜೀವಗಳು ಬಲಿಯಾಗಿವೆ. ಅದರಲ್ಲಿ ಎಷ್ಟೋ ಸಾವುಗಳನ್ನು ತಪ್ಪಿಸಬಹುದಾಗಿತ್ತು. ನಾಲ್ಕು ರಾಜ್ಯಗಳು ಮತ್ತು ಒಂದುಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ಹಾಗೂ ಉತ್ತರಾಖಂಡದಲ್ಲಿ ನಡೆದ ಕುಂಭಮೇಳ –
ಇವೆರಡರಲ್ಲೂ ಜನರು ಗುಂಪು ಸೇರುತ್ತಾರೆಂದು ಮೊದಲೇ ಗೊತ್ತಿದ್ದರೂ, ಅವನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಅಂತರರಾಷ್ಟ್ರೀಯ ಮಾಧ್ಯಮಗಳು, ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಟೀಕಿಸಿದ್ದಾರೆ. ಈ ಎರಡೂ
ಸಂದರ್ಭದಲ್ಲಿ ಜನರು ಗುಂಪುಗೂಡಿದಾಗ ಯಾವುದೇ ಸೋಂಕು ನಿರೋಧಕ ಕ್ರಮಗಳನ್ನು ಅನುಸರಿಸದ ಕಾರಣ, ಅವು “ಸೂಪರ್ ಸ್ಪ್ರೆಡರ್”ಗಳಾಗಿಬಿಟ್ಟವು. ಅದು ಸಾಲದೆಂಬಂತೆ, ಕೇಂದ್ರ ಸರ್ಕಾರದ ಇಬ್ಬರು ಅತಿಮುಖ್ಯ ವ್ಯಕ್ತಿಗಳಾದ ಪ್ರಧಾನಮಂತ್ರಿ ಮತ್ತು ಗೃಹಮಂತ್ರಿಗಳೂ ಸಹ ಸದರಿ ಚುನಾವಣಾ ರ್ಯಾಲಿಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಲಿಲ್ಲ. ಕೊರೋನಾ ಎರಡನೇ ಅಲೆ ಲಕ್ಷಾಂತರ ಜನರನ್ನು ಬಾಧಿಸುತ್ತಿರುವುದು ಮಾತ್ರವಲ್ಲ, ಪ್ರತಿದಿನ ಹಲವಾರು ಜನ ಸೋಂಕಿನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸಾಯುವುದಕ್ಕೆ ಆಸ್ಪತ್ರೆಯಲ್ಲಿ ಔಷಧಿ, ಹಾಸಿಗೆ, ಆಕ್ಸಿಜನ್, ಐಸಿಯು ಬೆಡ್, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ, ಇತ್ಯಾದಿಗಳ ಕೊರತೆಯೇ ಕಾರಣ ಎಂಬುದು ತಜ್ಞರ ಅಭಿಪ್ರಾಯ.
ಇದುಒಂದೆಡೆಯಾದರೆ, ಸ್ಮಶಾನ ಮತ್ತು ಚಿತಾಗಾರದಲ್ಲಿ ಶವಸಂದಣಿ ಬಹಳ ಹೆಚ್ಚಾಗಿರುವುದರಿಂದ, ಸತ್ತವರಿಗೆ ಸರಿಯಾಗಿ
ಅಂತ್ಯಸಂಸ್ಕಾರವನ್ನೂ ಮಾಡಲಾಗದೆ ನದಿ ಮತ್ತು ರಸ್ತೆಬದಿಗಳಲ್ಲಿ ಶವಗಳನ್ನು ಬಿಸಾಡಲಾಗುತ್ತಿದೆ. ಎರಡನೇ ಅಲೆ ಬರುತ್ತದೆಂದು ತಜ್ಞರು ಬಹಳ ಮುಂಚೆಯೇ ಎಚ ್ಚರಿಕೆ ನೀಡಿದರೂ, ಪೂರ್ವಸಿದ್ಧತೆ ನಡೆಸಲು ಸಾಕಷ್ಟು ಸಮಯವಿದ್ದರೂ, ಸರ್ಕಾರವು ಅತ್ತ ಕಡೆ ಸರಿಯಾಗಿ ಗಮನ ಹರಿಸಲಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಗೆ ಇಂದು ಜನಸಾಮಾನ್ಯರು ತಮ್ಮ ಪ್ರಾಣಗಳ ಮೂಲಕ ಬೆಲೆ ತೆರುತ್ತಿದ್ದಾರೆ. ದೇಶ ಇಂದು ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಗೆ ಈ ಮಹಾಮಾರಿ ಮತ್ತು ಸಾವುನೋವಿನ ಜೊತೆ ಜೊತೆಗೆ, ಸರ್ಕಾರದ ಅಮಾನುಷ ಧೋರಣೆಯೂ ಒಂದು ಬಹುಮುಖ್ಯ ಕಾರಣ.
ಲಕ್ಷಾಂತರ ಜನ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಕಳೆದುಕೊಂಡು ಪ್ರತಿದಿನ ನೋವುಣ್ಣುತ್ತಿದ್ದರೂ, ಸರ್ಕಾರಕ್ಕೆ ಅದರ ಕಡೆ
ಗಮನವೇ ಇದ್ದಂತಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಿರುವ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮೊದಲಾದವರನ್ನು ಸರ್ಕಾರ “ಫ್ರಂಟ್‍ಲೈನ್ ಯೋಧರು” ಎಂದು ಕರೆದು ಶ್ಲಾಘಿಸಿದೆ. ಜನರ ಮಧ್ಯೆ, ಅದರಲ್ಲೂ ಗ್ರಾಮೀಣ ಜನರ ಮಧ್ಯೆಯೇ ಇದ್ದುಕೊಂಡು ಹಗಲಿರುಳೂ ಅವಿರತವಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗಂತೂ ವಿಶೇಷ ಶ್ಲಾಘನೆ ಲಭಿಸಿದೆ. ಆದರೆ ಬೇಸರದ ಸಂಗತಿಯೆಂದರೆ, ಸರ್ಕಾರ ಅವರನ್ನು ಮಾಧ್ಯಮದ ಮುಂದೆ ಬಾಯಿ ತುಂಬಾ ಹೊಗಳಿದ್ದು ಬಿಟ್ಟರೆ, ಬೇರೆ
ಫ್ರಂಟ್‌ಲೈನ್ ನೌಕರರಿಗೆ ನೀಡುವಂತೆ ಆಶಾಗಳಿಗೂ ವೇತನ ನೀಡುವುದು ಬಿಡಿ, ಕಡೇ ಪಕ್ಷ ಅವರಿಗೆ ಸೋಂಕಿನಿಂದ ಕಾಪಾಡಿಕೊಳ್ಳಲು ಮತ್ತು ಸೋಂಕು ಹರಡದಂತೆ ತಡೆಯಲು ಪಿಪಿಇ ಕಿಟ್‍ಗಳನ್ನೂ ಕೊಟ್ಟಿಲ್ಲ. ಇದರ ಪರಿಣಾಮವಾಗಿ, ಬಹಳಷ್ಟು ಆಶಾ ಕಾರ್ಯಕರ್ತೆಯರಿಗೆ ಸೋಂಕು ತಗುಲುತ್ತಿದೆ ಮತ್ತು ಅವರು ಕೊರೋನಾ ವಿರುದ್ಧದ ಯುದ್ಧದಲ್ಲಿ ಹುತಾತ್ಮರಾಗುತ್ತಿದ್ದಾರೆ.
ಅವರ ಸಮಸ್ಯೆಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಅವರು ಸತ್ತಮೇಲೆ ಅವರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕೆಂಬ ಮಾತು ದಾಖಲೆಗಳಲ್ಲಿ ಉಳಿದುಕೊಂಡಿದೆಯೇ ಹೊರತು, ಕಾರ್ಯರೂಪಕ್ಕೆ ಬರುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ವರ್ಗದ ಜನರಿಗೆ ಲಾಕ್‍ಡೌನ್ ಪರಿಹಾರ ಘೋಷಿಸಿದಾಗಲೂ ಆಶಾಗಳನ್ನು ಕಡೆಗಣಿಸಲಾಯಿತು. ಕನಿಷ್ಟ ವೇತನವನ್ನೂ ನೀಡದೆ, ಅವರ ರಕ್ತದ ಕೊನೆ ಹನಿಯನ್ನೂ ಬಸಿದು ದುಡಿಮೆಗೆ ಹಚ್ಚುವ ಸರ್ಕಾರಗಳು, ಅವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ, ಸ್ಕೀಮ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ ಅಖಿಲ ಭಾರತ ಸಮಿತಿಯು ದೇಶದ ಎಲ್ಲಾ ಕಾರ್ಯಕರ್ತೆಯರೂ ಒಂದುಗೂಡಿ, ಮೇ 24, 2021 ರಂದು ನಡೆಯುವ ಒಂದು ದಿನದ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಿದೆ. ಆಯಾ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ, “ಕೆಲಸ ಸ್ಥಗಿತಗೊಳಿಸುವುದು”, ಆನ್‍ಲೈನ್ ಪ್ರತಿಭಟನೆ, ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಆನ್‍ಲೈನ್/ಆಫ್‍ಲೈನ್ ಮೂಲಕ ಮಾನ್ಯ ಪ್ರಧಾನಿಗೆ ಮನವಿಪತ್ರ ಸಲ್ಲಿಸಲಾಗುವುದು.
ಬೇಡಿಕೆಗಳು ಹೀಗಿವೆ:
- ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಇತರೆ ಫ್ರಂಟ್‍ಲೈನ್ ಯೋಧರಿಗೆ ತಲಾ 5000 ರೂಪಾಯಿಗಳ
ಕೋವಿಡ್ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಿ. - ಕೋವಿಡ್-19 ಸೋಂಕು ತಗುಲಿದ ಆಶಾ ಕಾರ್ಯಕರ್ತೆಯರು ಮತ್ತು ಇತರೆ ಫ್ರಂಟ್‍ಲೈನ್ ಯೋಧರಿಗೆ ಚಿಕಿತ್ಸೆಗಾಗಿ 25,000 ರೂಪಾಯಿಗಳನ್ನು ನೀಡಿ. ಒಂದು ವೇಳೆ ಆಸ್ಪತ್ರೆ ಖರ್ಚು ಈ ಮೊತ್ತವನ್ನು ಮೀರಿದರೆ, ಅದಕ್ಕೆ ತಕ್ಕಂತೆ
ಚಿಕಿತ್ಸಾ ಸೌಲಭ್ಯ ನೀಡಿ. - ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಇತರೆ ಫ್ರಂಟ್‍ಲೈನ್ ಯೋಧರಿಗೆ ಸಮರ್ಪಕ ಪ್ರಮಾಣದಲ್ಲಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಕೈಗವಸು ಮತಗತಿತರ ಸುರಕ್ಷಾ ಪರಿಕರಗಳನ್ನು ಒದಗಿಸಿ. ಫ್ರಂಟ್‍ಲೈನ್ ಯೋಧರ ಪ್ರಾಣ ಉಳಿಸಿ!
- ಹೋದ ವರ್ಷದ ಕೋವಿಡ್-19 ಮೊದಲ ಅಲೆಯಲ್ಲಿ ಸಾವನ್ನಪ್ಪಿದ ಎಲ್ಲಾ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ಈ ಕೂಡಲೇ 50 ಲಕ್ಷ ರೂಪಾಯಿಗಳ ವಿಮೆ ಪರಿಹಾರ ಬಿಡುಗಡೆ ಮಾಡಿ.