ಬೆಂಗಳೂರು: ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಹಳ್ಳಿಕಾರ್ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವ ಅಗತ್ಯವಿದೆ. ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗದ ಸೂಕ್ತ ಪ್ರವರ್ಗಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ತಮ್ಮ ಸಂಪೂರ್ಣ ಸಹಮತಿ ಇದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.
ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಅತ್ಯಧಿಕ ಅಂಕ ಗಳಿಸಿದ ಹಳ್ಳಿಕಾರ್ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಸಣ್ಣ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಂತಹ ಸಮುದಾಯಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಚಿನ್ನಸ್ವಾಮಿ, ವೆಂಕಟಸ್ವಾಮಿ ಹಾಗೂ ಕಾಂತರಾಜ್ ಆಯೋಗಗಳನ್ನು ರಚಿಸಲಾಗಿತ್ತು. ಹಿಂದುಳಿದ ಸಮುದಾಯಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದು ಈ ಆಯೋಗಗಳ ಉದ್ದೇಶವಾಗಿತ್ತು. ಆದರೂ ಹಲವು ಸಮುದಾಯಗಳು ಇನ್ನೂ ಹಿಂದುಳಿದಿವೆ ಎಂದು ಹೇಳಿದರು.

ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ದೊರೆಯಬೇಕು ಎಂಬುದು ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಹಳ್ಳಿಕಾರ್ ಸಮುದಾಯವು ಯಾವ ಪ್ರವರ್ಗಕ್ಕೆ ಸೇರಲು ಅರ್ಹವಾಗಿದೆಯೋ, ಆ ಪ್ರವರ್ಗಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯಮಂತ್ರಿ ಈ ವಿಚಾರಕ್ಕೆ ಒಪ್ಪಿಗೆ ಸೂಚಿಸುವಂತೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ ಎಂದರು.
ಸುಮಾರು 2,500 ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಕೆ.ಎಂ. ನಾಗರಾಜ ಅವರು ಸುಮಾರು ₹2 ಕೋಟಿ ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸುತ್ತಿರುವುದು ಸಮಾಜದ ಮೇಲಿನ ಅವರ ಕಳಕಳಿಗೆ ಸಾಕ್ಷಿಯಾಗಿದೆ ಎಂದು ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡುವ ಅವರ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದರು.
2010ರಲ್ಲಿ ತಾವು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ ಕೆ.ಎಂ. ನಾಗರಾಜ ಅವರ ಆಶೀರ್ವಾದ ಪಡೆಯಲು ತೆರಳಿದ್ದನ್ನು ಸ್ಮರಿಸಿದ ಅವರು, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ನಾಗರಾಜ ಅವರು ಅಗತ್ಯ ಸೌಕರ್ಯಗಳಿದ್ದ ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಪಕ್ಷ ಸಂಘಟನೆಗೆ ಸಲಹೆಗಳನ್ನು ನೀಡಿದ್ದರು. ರಾಜಕೀಯ ಬದುಕಿನಲ್ಲಿ ಯಶಸ್ವಿಯಾಗಲು ಅವರ ಮಾರ್ಗದರ್ಶನ ಸಹಕಾರಿಯಾಯಿತು ಎಂದು ತಿಳಿಸಿದರು.
ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳು ಭಾರತವನ್ನು ಬಲಿಷ್ಠಗೊಳಿಸಿವೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶದಲ್ಲಿ ಶೇ.12ರಷ್ಟು ಮಾತ್ರ ಅಕ್ಷರಸ್ಥರಿದ್ದರು. ಇಂದು ಸಾಕ್ಷರತೆ ಪ್ರಮಾಣ ಶೇ.80ಕ್ಕಿಂತ ಹೆಚ್ಚಾಗಿದೆ. ಶಿಕ್ಷಣದ ಬೆಳವಣಿಗೆಯಿಂದ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರ್ಗಳು, ವೈದ್ಯರು ಸೇರಿದಂತೆ ನುರಿತ ವೃತ್ತಿಪರರು ರೂಪುಗೊಂಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡಿಕೊಳ್ಳುವಾಗ ಅದು ತಮ್ಮ ಭವಿಷ್ಯಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ಹೇಗೆ ಉಪಯುಕ್ತವಾಗಲಿದೆ ಎಂಬುದನ್ನು ಪರಿಗಣಿಸಬೇಕು. ಪೋಷಕರು ನೀಡಿದ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬದಲಾವಣೆಗಳಾಗುತ್ತಿವೆ. ಕ್ಷಣಾರ್ಧದಲ್ಲಿ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನಗಳು ಬೆಳೆಯುತ್ತಿವೆ. ಈ ಬದಲಾವಣೆಗಳಿಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯೂ ರೂಪುಗೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜತೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಶಿಕ್ಷಣ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಪ್ರಗತಿಯೊಂದಿಗೆ ವಿದ್ಯಾರ್ಥಿಗಳೂ ಹೆಜ್ಜೆ ಹಾಕಬೇಕು. ಫೌಂಡೇಷನ್ ನೀಡುತ್ತಿರುವ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನಗಳು ಅವರ ಮುಂದಿನ ಶಿಕ್ಷಣ ಹಾಗೂ ಸಾಧನೆಗೆ ನೆರವಾಗಲಿ ಎಂದು ಹಾರೈಸಿದರು.















































































