ಚೆನ್ನೈ: ಶನಿವಾರ ನಾಪತ್ತೆಯಾಗಿದ್ದ ನಾಲ್ವರು ಶಾಲಾ ಮಕ್ಕಳು ಭಾನುವಾರ ತಿರುನೀರುಮಲೈ ಸರೋವರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕ್ರೋಮ್‌ಪೇಟ್‌ನ ಲಕ್ಷ್ಮೀಪುರಂ ನಿವಾಸಿಗಳಾದ ಕೆ. ದೇವದರ್ಶನ್ (12), ಡಿ. ಯುವನೇಶ್ (10) ಹಾಗೂ ಪೂಜಾ ಮತ್ತು ಖುಷಿ (13) ಮೃತ ಮಕ್ಕಳು. ಶನಿವಾರ ಮನೆ ಸಮೀಪ ಒಟ್ಟಿಗೆ ಆಟವಾಡುತ್ತಿದ್ದ ಮಕ್ಕಳು ಬಳಿಕ ಮನೆಗೆ ಮರಳಿರಲಿಲ್ಲ. ಕುಟುಂಬದವರು ಹುಡುಕಾಟ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ತಡರಾತ್ರಿ ಕ್ರೋಮ್‌ಪೇಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಭಾನುವಾರ ಲಕ್ಷ್ಮೀಪುರಂ ಸಮೀಪದ ತಿರುನೀರುಮಲೈ ಪೆರಿಯಾ ಏರಿ ಸರೋವರದಲ್ಲಿ ನಾಲ್ಕು ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದರು. ಬಳಿಕ ಕುಟುಂಬದವರು ಮಕ್ಕಳನ್ನು ಗುರುತಿಸಿದರು.
ಮಕ್ಕಳು ಸರೋವರದ ಬಳಿಗೆ ತೆರಳಿದ್ದೇಕೆ ಮತ್ತು ಯಾವ ಪರಿಸ್ಥಿತಿಯಲ್ಲಿ ಮೃತಪಟ್ಟರು ಎಂಬುದು ನಿಗೂಢವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.















































































