ವಿಜಯಪುರ: ಜನರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯದ ಸಂಭ್ರಮಕ್ಕೆ ಸಾಕ್ಷಿಯಾದ ಒಂದು ತಿಂಗಳ ಎಂಬಿಪಿ ಉತ್ಸವವು ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಶನಿವಾರ ಸಂಜೆ ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು.
ಉತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜನರ ನಡುವೆ ನಡೆದ ಕಾರ್ಯಕ್ರಮವು ಸಂಭ್ರಮದ ವಾತಾವರಣದಲ್ಲಿ ಜರುಗಿತು.
ಈ ಕುರಿತು ಸಚಿವ ಎಂ.ಬಿ. ಪಾಟೀಲ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಉತ್ಸವದ ಯಶಸ್ಸು ಹಾಗೂ ಜನರೊಂದಿಗಿನ ಬಾಂಧವ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳ ಕಾಲ ನಡೆದ ಉತ್ಸವವು ಜನರಿಗೆ ಮನರಂಜನೆ ಒದಗಿಸುವುದರ ಜತೆಗೆ, ಜಾನಪದ ಕಲೆ, ಭಜನಾಪದಗಳು, ಸಾಂಸ್ಕೃತಿಕ ಪರಂಪರೆ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿತು. ಈ ಮೂಲಕ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ ಅವಕಾಶ ದೊರೆಯಿತು ಎಂದು ಅವರು ತಿಳಿಸಿದ್ದಾರೆ.
ವಿವಿಧ ಮಠಗಳ ಪೂಜ್ಯ ಗುರುಗಳ ಉಪಸ್ಥಿತಿ, ಶುಭನುಡಿಗಳು ಹಾಗೂ ಆಶೀರ್ವಚನಗಳು ತಮ್ಮ ಸಮಾಜ ಸೇವೆಗೆ ಮತ್ತಷ್ಟು ಸ್ಫೂರ್ತಿ ನೀಡಿವೆ ಎಂದು ಪಾಟೀಲ್ ಹೇಳಿದ್ದಾರೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಮ್ಮ ಪ್ರೋತ್ಸಾಹ ಸದಾ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.
ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ತಮ್ಮ ಸಮಾಜ ಸೇವೆಯ ನಿಜವಾದ ಶಕ್ತಿ. ಜನರೊಂದಿಗಿನ ಅವಿನಾಭಾವ ಬಾಂಧವ್ಯವೇ ಬದುಕಿನ ಬಹುದೊಡ್ಡ ಸಂಪತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ಎಂಬಿಪಿ ಉತ್ಸವವು ಜನರನ್ನು ಒಗ್ಗೂಡಿಸುವ ವೇದಿಕೆಯಾಗಿ ಗಮನ ಸೆಳೆಯಿತು.















































































