ಅಮರಾವತಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ರಾಜ್ಯಾದ್ಯಂತ ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ಪೂರೈಸಲು ನಿರ್ಧರಿಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಬುಧವಾರ ತಿಳಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, “ಈ ಬಾರಿ ಆಂಧ್ರಪ್ರದೇಶದಾದ್ಯಂತ ಇರುವ ಎಲ್ಲ ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುವುದು. ರಾಜ್ಯದಾದ್ಯಂತ ಗಣೇಶೋತ್ಸವ ಆಚರಿಸುವ ಸಮುದಾಯಗಳಿಗೆ ಬೆಂಬಲ ನೀಡಲು ಹಾಗೂ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಪ್ರಮುಖ ಉಪಕ್ರಮ ಇದಾಗಿದೆ” ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಗಣೇಶ ಚತುರ್ಥಿ ಆಚರಣೆ ಸೆಪ್ಟೆಂಬರ್ 14ರಿಂದ 25ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಟಪಗಳಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಅನುಕೂಲವಾಗಲಿದೆ.
ಗಣೇಶ ದೇವರು ಪ್ರತಿಯೊಂದು ಕುಟುಂಬಕ್ಕೂ ಸಮೃದ್ಧಿ, ಸಂತೋಷ ಹಾಗೂ ಯಶಸ್ಸನ್ನು ಕರುಣಿಸಲಿ ಎಂದು ಸಚಿವ ನಾರಾ ಲೋಕೇಶ್ ಶುಭ ಹಾರೈಸಿದ್ದಾರೆ.







































































