ನವದೆಹಲಿ: ಜನಗಣತಿ 2027ರ ಮೊದಲ ಹಂತದ ಭಾಗವಾಗಿ ಮನೆ ಪಟ್ಟಿ ಹಾಗೂ ವಸತಿ ಗಣತಿ (HLO) ಕಾರ್ಯಾಚರಣೆಗಳು ರಾಜಸ್ಥಾನ, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ವ್ಯಾಪ್ತಿಯಲ್ಲಿ ಆರಂಭಗೊಂಡಿವೆ.
ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್, ತೆಲಂಗಾಣ ಮತ್ತು ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಮನೆ-ಮನೆಗೆ ತೆರಳಿ ಗಣತಿ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಗುಜರಾತ್, ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಪುದುಚೇರಿಯಲ್ಲಿ ಸ್ವಯಂ-ಗಣತಿ (Self Enumeration) ಸೌಲಭ್ಯ ಆರಂಭವಾಗಿದ್ದು, ಮೇ 31ರವರೆಗೆ ಲಭ್ಯವಿರಲಿದೆ. ಈ ಪ್ರದೇಶಗಳಲ್ಲಿ ಜೂನ್ 1ರಿಂದ 30ರವರೆಗೆ ಭೌತಿಕ ಗಣತಿ ಕಾರ್ಯ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಸ್ವಯಂ-ಗಣತಿ ಮೇ 21ರವರೆಗೆ ಮುಂದುವರಿಯಲಿದ್ದು, ನಂತರ ಗಣತಿದಾರರು ಮನೆಮನೆಗೆ ಭೇಟಿ ನೀಡಲಿದ್ದಾರೆ.
ಏಪ್ರಿಲ್ 16ರಿಂದ ಮೇ 15ರವರೆಗೆ ಅಂಡಮಾನ್-ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಮಿಜೋರಾಂ, ಒಡಿಶಾ, ಸಿಕ್ಕಿಂ, ಎನ್‌ಡಿಎಮ್‌ಸಿ (NDMC) ಹಾಗೂ ದೆಹಲಿ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಗಣತಿ ಪೂರ್ಣಗೊಂಡಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿ ತಿಳಿಸಿದೆ.
ಇದುವರೆಗೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1.44 ಕೋಟಿಗೂ ಹೆಚ್ಚು ಕುಟುಂಬಗಳು ಅಧಿಕೃತ ಪೋರ್ಟಲ್ ಮೂಲಕ ಸ್ವಯಂ-ಗಣತಿ ಪೂರ್ಣಗೊಳಿಸಿವೆ.
ಮೊದಲ ಬಾರಿಗೆ ಡಿಜಿಟಲ್ ಮಾದರಿಯಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ, ಗಣತಿದಾರರು ಮೊಬೈಲ್ ಅಪ್ಲಿಕೇಶನ್ ಮೂಲಕ ಮನೆಗಳ ವಿವರ, ಸೌಲಭ್ಯಗಳು ಮತ್ತು ಇತರೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
1948ರ ಜನಗಣತಿ ಕಾಯ್ದೆಯಡಿ ಸಂಗ್ರಹವಾಗುವ ಎಲ್ಲ ಮಾಹಿತಿಯೂ ಗೌಪ್ಯವಾಗಿರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.























































