ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಹಿನ್ನಡೆ ಡಿಎಂಕೆ ನಾಯಕತ್ವವನ್ನು ಕಂಗೆಡಿಸಿದ್ದು, ಪಕ್ಷದ ಮುಂದಿನ ರಾಜಕೀಯ ಕಾರ್ಯತಂತ್ರದ ಕುರಿತು ಚರ್ಚಿಸಲು ಮೇ 14ರಂದು ಮಹತ್ವದ ಸಭೆ ಕರೆಯಲಾಗಿದೆ.
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಚೆನ್ನೈನ ಪಕ್ಷದ ಪ್ರಧಾನ ಕಚೇರಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳ ಸಭೆ ನಡೆಯಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ತಿಳಿಸಿದ್ದಾರೆ.
ಸಭೆಯಲ್ಲಿ ಚುನಾವಣಾ ಸೋಲಿನ ಕಾರಣಗಳು, ಪಕ್ಷದ ಸಂಘಟನೆ ಎದುರಿಸುತ್ತಿರುವ ಸವಾಲುಗಳು ಹಾಗೂ ಭವಿಷ್ಯದ ರಾಜಕೀಯ ಕಾರ್ಯತಂತ್ರದ ಬಗ್ಗೆ ಸಮಗ್ರ ಚರ್ಚೆ ನಡೆಯುವ ಸಾಧ್ಯತೆ ಇದೆ. ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಲಾಗಿದೆ.
ಇದೇ ವೇಳೆ, ಚುನಾವಣಾ ಫಲಿತಾಂಶದ ಬಳಿಕ ಡಿಎಂಕೆ ಶಾಸಕಾಂಗ ಪಕ್ಷವು ಉದಯನಿಧಿ ಸ್ಟಾಲಿನ್ ಅವರನ್ನು ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದೆ. ಇದನ್ನು ಪಕ್ಷದ ನಾಯಕತ್ವದಲ್ಲಿ ಪೀಳಿಗೆಯ ಬದಲಾವಣೆಯ ಸೂಚನೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.























































