ಕಾಬೂಲ್: ಉತ್ತರ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ಬಳಿಕ ಕಾಬೂಲ್ ಪ್ರಾಂತ್ಯದಲ್ಲಿ ಮನೆ ಕುಸಿದು ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಒಂದು ಮಗು ಗಾಯಗೊಂಡಿದೆ. ಈ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಮೊಹಮ್ಮದ್ ಯೂಸುಫ್ ಹಮ್ಮದ್ ಮಾಹಿತಿ ನೀಡಿದ್ದಾರೆ.
ಭೂಕಂಪದ ಕೇಂದ್ರಬಿಂದು ಭೂಮಿಯಿಂದ ಸುಮಾರು 186.4 ಕಿಮೀ ಆಳದಲ್ಲಿ, 36.55 ಉತ್ತರ ಅಕ್ಷಾಂಶ ಮತ್ತು 70.85 ಪೂರ್ವ ರೇಖಾಂಶದಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಲವಾದ ಕಂಪನಗಳು ಅನುಭವವಾಗಿವೆ.
ಇದರ ಪರಿಣಾಮವಾಗಿ ಭಾರತದಲ್ಲಿಯೂ ಕಂಪನ ಭೀತಿ ಉಂಟಾಗಿ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ಭೂಕಂಪನ ಅನುಭವವಾಗಿದೆ. ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಹಾಗೂ ಫರಿದಾಬಾದ್ ಪ್ರದೇಶಗಳಲ್ಲಿ ಜನರು ಭಯಭೀತರಾಗಿ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.
ಭೂಕಂಪದ ವೇಳೆ ಪೀಠೋಪಕರಣಗಳು ಮತ್ತು ನೇತಾಡುವ ವಸ್ತುಗಳು ತೂಗಾಡಿದ ಅನುಭವವಾಗಿದ್ದು, ಕೆಲವೇ ಸೆಕೆಂಡುಗಳ ಕಾಲ ಕಂಪನ ಮುಂದುವರಿದಿದ್ದರೂ ಸ್ಪಷ್ಟವಾಗಿ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಫ್ಘಾನಿಸ್ತಾನವು ಭೂಕಂಪಗಳಿಗೆ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ಪ್ರತಿ ವರ್ಷ ಸರಾಸರಿ ನೂರಾರು ಮಂದಿ ಸಾವನ್ನಪ್ಪುವಂತಹ ಘಟನೆಗಳು ನಡೆಯುತ್ತಿವೆ. ಯುರೇಷಿಯನ್ ಹಾಗೂ ಭಾರತೀಯ ಟೆಕ್ಟೋನಿಕ್ ಫಲಕಗಳ ನಡುವೆ ಇರುವುದರಿಂದ ಈ ಭಾಗದಲ್ಲಿ ಭೂಕಂಪ ಚಟುವಟಿಕೆಗಳು ಹೆಚ್ಚಾಗಿರುವುದು ಕಾರಣವಾಗಿದೆ.
ಪರ್ವತ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದಾಗ ಭೂಕುಸಿತಗಳ ಅಪಾಯ ಹೆಚ್ಚಿದ್ದು, ಜೀವ ಮತ್ತು ಆಸ್ತಿ ಹಾನಿ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.























































